Monday, September 16, 2024

“ಸರ್ವಪಲ್ಲಿ ರಾಧಾಕೃಷ್ಣನ್” ದೇಶ ಕಂಡ ಆದರ್ಶ ಶಿಕ್ಷಕ! – ಶಿಕ್ಷಕರ ದಿನಾಚರಣೆಯ ಕುರಿತು ಆಮಿರ್ ಬನ್ನೂರು ಅವರ ವಿಶೇಷ ಲೇಖನ

“ವಿದ್ಯೆ ಕಲಿಸಿ, ಸರಿ ತಪ್ಪನ್ನು ತಿದ್ದಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ” ಎಂಬ ಮಾತೇ ಅಮೋಘ. ಶಿಕ್ಷಕರು ಸಮಾಜಕ್ಕೆ ಒಳಿತು ಕೆಡುಕು ಯಾವುದೆಂದು ನಿರ್ಣಯಿಸುವವರು. ತಂದೆ ತಾಯಿಯ ನಂತರ ಸಮಾಜದಲ್ಲಿನ ಪ್ರತಿಯೊಬ್ಬರು ಶರಣಾಗುವುದು ವಿದ್ಯೆ ಕಲಿಸುವ ಶಿಕ್ಷಕರಿಗೆ . ಶಿಕ್ಷಣದ ಮೂಲ ಉದ್ದೇಶವನ್ನು ತಿಳಿಸಿ, ಪ್ರತಿ ವ್ಯಕ್ತಿಯ ಬದುಕನ್ನು ಬೆಳಗಿಸುತ್ತಾ, ಮನುಷ್ಯನನ್ನು ಸಮಾಜದ ಉನ್ನತ ನಾಗರಿಕರನ್ನಾಗಿ ರೂಪುಗೊಳಿಸುವ ಅತಿ ದೊಡ್ಡ ಜವಾಬ್ದಾರಿ ಹೊತ್ತು ಕಾರ್ಯಾಚರಿಸುವವರೇ ಶಿಕ್ಷಕರು.


”ಆನೆ ನಡೆದದ್ದೇ ದಾರಿ” ಎಂಬ ನಾಣ್ಣುಡಿಯ ಹಾಗೆ ಬಹುತೇಕ ವಿದ್ಯಾರ್ಥಿಗಳು ಶಿಕ್ಷಕರು ತೋರಿಸುವ ದಾರಿಗೆ ಅವಲಂಬಿತರಾಗಿ ಬದುಕನ್ನು ಕಟ್ಟಿಕೊಳ್ಳುವ ಪ್ರಸಂಗಗಳೇ ಹೆಚ್ಚು. ಓರ್ವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಸಮಾಜಕ್ಕೆ ಪೂರಕವಾಗಿ ಅಥವಾ ಮಾರಕವಾಗಿ ಬೆಳೆಯಬೇಕೋ ಎಂಬುದನ್ನು ನಿರ್ಧರಿಸುವವನೇ ಶಿಕ್ಷಕ. ಆದರೆ ಶಿಕ್ಷಣ ಮತ್ತು ಶಿಕ್ಷಕ ಸರಿ ದಾರಿಯನ್ನಸ್ಟೇ ತೋರುತ್ತದೆ ಎಂಬುದಂತೂ ಸತ್ಯ.

”ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ” ಆದಿ ಶಂಕರ ರ ಈ ಶ್ಲೋಕ ಗುರುಗಳ ಬಗ್ಗೆ ಹೀಗೆ ಹೇಳುತ್ತದೆ.


ಗುರು ಈ ಲೋಕದ ಸೃಷ್ಟಿಕರ್ತ ಆಗಿದ್ದಾನೆ, ಆ ಕಾರಣಕ್ಕಾಗಿ ಲೋಕವೇ ಗುರುವಿಗೆ ತಲೆಬಾಗುತ್ತದೆ. ಆದಿಶಂಕರರ ಈ ಮಾತಿನಿಂದ ಹೀಗೂ ತಿಳಿದುಕೊಳ್ಳಬಹುದು. ದೇವರೊಬ್ಬನು ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಅದೇ ಜಗತ್ತನ್ನು ಸಂಕೀರ್ಣಗೊಳಿಸಿ ಅಭಿವೃದ್ಧಿಪಡಿಸಲು ”ಗುರುಗಳು” ಎಂಬ ವಿಶೇಷ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದಾನೆ ಎಂದು. ಶಿಕ್ಷಕರು ಭಗವಂತನ ಹತ್ತಿರದ ವಿಶೇಷವಾದ ಅವನ ಬ್ರಹ್ಮಾಂಡ ಜಗತ್ತನ್ನು ಶ್ರೀಮಂತಗೊಳಿಸುವ ಜವಾಬ್ದಾರಿಯನ್ನ ಹೊತ್ತು ಬಂದ ಪ್ರತಿನಿಧಿಗಳು. ಭಗವಂತನ ಇಚ್ಛೆಯಂತೆ ಶಿಕ್ಷಕರು ನಡೆಯುವುದಾದರೆ ಅವರ ನಡೆ-ನುಡಿಗಳೆಲ್ಲವೂ ಸಮಂಜಸ. ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಗಳ ಬದುಕು ಹಸನಾಗಿಸಲು ಹಾರೈಸಬೇಕು. ಬದುಕಿನಲ್ಲಿ ಗೆದ್ದು ಬರುವ ಬಗ್ಗೆ ಆತ್ಮವಿಶ್ವಾಸವನ್ನು ತುಂಬುವಂತಹ ಆರೋಗ್ಯಕರ ಮಾತುಗಳನ್ನು ಹೇಳಿ ಕೊಡಬೇಕು. ಮಹಾತ್ಮರುಗಳ ಚರಿತ್ರೆಗಳನ್ನು, ಪರಿವರ್ತನೆಗೊಳ್ಳುವ ನೀತಿ ಕಥೆಗಳನ್ನು ಮಕ್ಕಳಿಗೆ ಹೇಳುತ್ತಲೇ ಇರಬೇಕು. ಕಲಿಸುವ ವಿದ್ಯೆಯಲ್ಲಿ ಪ್ರೀತಿ ಮತ್ತು ವಿಶ್ವಾಸ ಹಾಗೂ ಗೌರವ ಆಳವಾಗಿ ಬೇರೂರಿರಬೇಕು. ಯಾಕೆಂದರೆ ಅದರಿಂದ ಪ್ರೇರಿತವಾಗುವ ಮಕ್ಕಳು ಸಮಾಜದಲ್ಲಿ ಬೆಳೆದು ನಿಂತಾಗಲೇ ಮಾನವ ಜನಾಂಗಕ್ಕೆ ನೆರಳಾಗಲು ಸಾಧ್ಯ. ದ್ವೇಷದ ಹಿನ್ನೆಲೆಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುವುದಾದರೆ ಅದರ ಪರಿಣಾಮ ಸಮಾಜಕ್ಕೆ ಮಾರಕವಾಗಿ ಬಾಧಿಸುತ್ತದೆ. ಅಂತಹ ವಿದ್ಯಾರ್ಥಿಗಳಿಂದ ಭಗವಂತನ ಸಂಪತ್ಭರಿತವಾದ ಈ ನಾಡು ಕಲುಷಿತಗೊಳ್ಳುತ್ತದೆ. ಓರ್ವ ವ್ಯಕ್ತಿಗೆ ಗುರುಗಳು ಎಷ್ಟು ಮುಖ್ಯ ಎಂಬುದನ್ನು ರಾಷ್ಟ್ರಕವಿ ಕುವೆಂಪುರವರು ತಮ್ಮ ಮಾತಿನ ಮೂಲಕ ಹೀಗೆ ಹೇಳುತ್ತಾರೆ:…


“ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು; ನುಗ್ಗಿದುದು ಮುಂದೆ ಧೀರದಂಡು! ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ;ಮುಗ್ಗಿತಿದೆ ಮಧ್ಯೆ ಹೇಡಿ ಹಿಂಡು!. ನೂರಕ್ಕೆ ನೂರರಷ್ಟು ಸತ್ಯವಾದ ಮಾತು ಇದು. ಜೀವನದಲ್ಲಿ ಗುರಿ ಮುಖ್ಯವಾದಷ್ಟು, ಗುರುಗಳೂ ಮುಖ್ಯ. ಯಾಕೆಂದರೆ ಬಹುತೇಕರ ಜೀವನಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದ ಕಾರಣದಿಂದ ಜೀವನದ ದಿಕ್ಕೇ ಬದಲಾಗಿ ಯಶಸ್ವಿಯಾದ ಉದಾಹರಣೆಗಳು ಸಾಕಷ್ಟಿವೆ.

ಅದೇನೆ ಇರಲಿ, ಭಾರತ ದೇಶದಲ್ಲಿ ”ಶಿಕ್ಷಕರು” ಅನ್ನುವಾಗ ನಮ್ಮ ಸ್ಮೃತಿ ಪಟಲದಲ್ಲಿ ಬರುವ ಮೊದಲ ಹೆಸರೇ “ಸರ್ವಪಲ್ಲಿ ರಾಧಾಕೃಷ್ಣನ್” ಇವರದ್ದು.


ಭಾರತ ದೇಶ ಸೇರಿದಂತೆ ಅನೇಕ ದೇಶಗಳಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಆದರೆ ಭಾರತ ದೇಶದಲ್ಲಿ ಸೆಪ್ಟೆಂಬರ್ ೫ ರ ದಿನವನ್ನು ದೇಶದ ಎರಡನೆಯ ರಾಷ್ಟ್ರಪತಿಗಳು ಹಾಗೂ ಶಿಕ್ಷಣತಜ್ಞ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಸವಿನೆನಪಿಗಾಗಿ ಮತ್ತು ಗೌರವಾರ್ಥವಾಗಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆಯೇ ಇದಕ್ಕೆ ಮೊದಲ ಕಾರಣ. ಮೂಲತಃ ತಮಿಳುನಾಡಿನವರು. ಅಲ್ಲಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ ೫, ೧೮೮೮ ರಲ್ಲಿ ಸರ್ವಪಲ್ಲಿ ಎಂಬ ಮನೆತನದಲ್ಲಿ ಸರ್ವಪಲ್ಲಿ ವೀರಸ್ವಾಮಿ ಹಾಗೂ ಸೀತಮ್ಮ ದಂಪತಿ ಪುತ್ರನಾಗಿ ಜನಿಸಿದರು.


ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್ ಮುಂತಾದ ಮಹನೀಯರ ತತ್ವಜ್ಞಾನವನ್ನು ಮತ್ತು ವೇದ, ಉಪನಿಷತ್ ಬಗ್ಗೆ ಆಳವಾಗಿ ಅಧ್ಯಯನ ಇವರದ್ದು. ಇವರು ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಯಶಸ್ವಿಯಾಗುತ್ತಲೇ ಬಂದವರು.
ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ ಅದನ್ನು ಗೌರವ, ಪ್ರೀತಿ, ನಿಷ್ಠೆಯಿಂದ ಕಂಡರು. ಹಲವು ವರ್ಷಗಳ ಕಾಲ ಶಿಕ್ಷಕರಾಗಿಯೂ ಸೇವೆಗೈದು ಭಾರತ ಕಂಡ ಮಾದರಿ ಶಿಕ್ಷಕ , ರಾಷ್ಟ್ರಪತಿ ಎಂಬ ವಿಶೇಷವಾದ ಹೆಗ್ಗಳಿಕೆ ಡಾ.ರಾಧಾಕೃಷ್ಣನ್ ಅವರದು. ನಮ್ಮ ಕರ್ನಾಟಕದ ಮೈಸೂರು ವಿಶ್ವವಿದ್ಯಾಲಯ, ಮಹಾರಾಜ ಕಾಲೇಜಿನ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವುದನ್ನು ಇಂದು ನಾವು ವಿಶೇಷವಾಗಿ ಸ್ಮರಿಸಬೇಕಿದೆ. 1931ರ ದಿನಗಳಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಐದು ವರ್ಷಗಳ ಕಾಲ,1939 ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಅವರು ಸೇವೆ ಸಲ್ಲಿಸಿದ ಕಾರಣವಾಗಿರಬಹುದೇನೋ ಇಂದಿಗೂ ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯನ್ನು ಕಾಣಲು ಸಾಧ್ಯವಾಗುತ್ತದೆ.


ರಾಧಾಕೃಷ್ಣನ್ ಅವರು 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿರುವುದು ಜೀವನದಲ್ಲಿ ಅವರು ಪಟ್ಟಂತಹ ಪರಿಶ್ರಮವನ್ನು ಹೋರಾಟದ ಫಲವನ್ನು ಸೂಚಿಸುತ್ತದೆ.
ಶಿಕ್ಷಕನೊಬ್ಬ ದೇಶದ ಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು, ಉಪರಾಷ್ಟ್ರಪತಿ ಹುದ್ದೆಯಲ್ಲಿರುವಾಗಲೇ ದೇಶದ ಪ್ರತಿಷ್ಠಿತ ”ಭಾರತ ರತ್ನ ಪ್ರಶಸ್ತಿಗೆ” ಭಾಜನರಾಗಿದ್ದು ಸರ್ವಪಲ್ಲಿ ರಾಧಾಕೃಷ್ಣನ್ ಮಾತ್ರವಾಗಿದ್ದಾರೆ. ಹೀಗೆ ಅನೇಕ ಮಹತ್ತರವಾದ ವಿಶೇಷತೆಗಳು ಇವರ ಜೀವನ ಚರಿತ್ರೆಯಲ್ಲಿ ಕಾಣಲು ಸಾಧ್ಯವಾಗುತ್ತದೆ.

ಶಿಕ್ಷಣದೊಂದಿಗೆ ಬರಹ ಮತ್ತು ಸಾಹಿತ್ಯ ಇವರ ಅಭಿರುಚಿಯಾಗಿತ್ತು. ಈ ಕ್ಷೇತ್ರಗಳಲ್ಲೂ ಇವರ ಕೊಡುಗೆ ಅಪಾರವಾಗಿದೆ. ‘ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್’ ಇವರ ಮೊದಲ ಪುಸ್ತಕ. ಹಾಗೇ ‘ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್’ ಇವರ ಬಗ್ಗೆ ಬರೆದು, ಅಮೆರಿಕಾದಲ್ಲಿ ಬಿಡುಗಡೆ ಮಾಡಲಾದ ಪುಸ್ತಕ . ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟಗೊಳ್ಳುತ್ತಿದ್ದವು. ಅದು ತತ್ವಜ್ಞಾನದ ಬಗೆಗಿನ ಬರಹಗಳಾಗಿದ್ದು ಎನ್ನುವುದು ಶ್ರದ್ದೆಯವಾಗಿದೆ. ಶಿಕ್ಷಣ,ರಾಜಕೀಯ, ಹೋರಾಟ ಮಾತ್ರವಾಗದೆ ಭಾರತೀಯ ಪುಸ್ತಕೋದ್ಯಮದಲ್ಲಿ ವಿಶೇಷವಾದ ಚಾಪು ಮೂಡಿಸಿದ ಇವರು ‘ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ’ ಮತ್ತು ‘ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಪುಸ್ತಕಗಳನ್ನು ಬರೆದಿದ್ದಾರೆ. ಸ್ವಾತಂತ್ರ ಹೋರಾಟಗಾರರಾಗಿದ್ದ ಇವರು ವಿದೇಶಿಯರಿಗೆ ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಬಗೆಗಿನ ಮಾಹಿತಿಯನ್ನು ತನ್ನ ಉಪನ್ಯಾಸಗಳ ಮೂಲಕ ಮನದಟ್ಟು ಮಾಡಿ ಬಂದವರು. ರಾಷ್ಟ್ರಪತಿ ಹುದ್ದೆಯ ಅಧಿಕಾರ ಮುಗಿದ ಬಳಿಕ ಮದ್ರಾಸಿನ ಮೈಲಾಪುರದಲ್ಲಿದ್ದ ಅಧಿಕೃತ ”ಗಿರಿಜಾ” ಎಂಬ ನಿವಾಸದಲ್ಲಿ 1975ರ ಏಪ್ರಿಲ್ 17 ರಂದು ಇಹಲೋಕ ತ್ಯಜಿಸಿದರು. ಇಂದಿಗೂ ಭಾರತೀಯರ ನರನಾಡಿಗಳಲ್ಲಿ ಅಚ್ಚಳಿಯದೆ ಸರ್ವಪಲ್ಲಿ ರಾಧಾಕೃಷ್ಣನ್ ಜೀವಂತವಾಗಿದ್ದಾರೆ. ದೇಶಕ್ಕಾಗಿ ಇವರು ಸಲ್ಲಿಸಿರುವ ಅನುಪಮಸೇವೆಯನ್ನು ಗುರುತಿಸಿ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ಮೂಲಕ ಅವರನ್ನು ಭಾರತ ಸ್ಮರಿಸುತ್ತಿದೆ. ಒಬ್ಬ ಉತ್ತಮ ಶಿಕ್ಷಕನಾಗುವುದು ಹೇಗೆ? ಶಿಕ್ಷಕ ಎಂದರೆ ಯಾರು? ಸಮಾಜದಲ್ಲಿ ಶಿಕ್ಷಕನ ಪಾತ್ರ ಏನು ಎಂಬುದನ್ನು ಅರಿಯಬೇಕಾದರೆ ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯನ್ನು ಒಮ್ಮೆ ಅವಲೋಕನ ಮಾಡಿದರಸ್ಟೇ ಸಾಕು. ಏಕೆಂದರೆ ಭೂತ ಕಾಲದಲ್ಲಿ ವಾಸಿಸಲು ಬಿಡದೆ ಭವಿಷ್ಯದ ಕನಸ ಕಂಡು ಮನಸ್ಸನ್ನು ಪ್ರಸ್ತುತ ಕ್ಷಣದಲ್ಲಿ ಕೇಂದ್ರೀಕರಿಸುವಂತೆ ಮಾಡುವ ಅದ್ಭುತ ಶಕ್ತಿ ಇರೋದು ಶಿಕ್ಷಣಕ್ಕೆ. ಅದರ ಶಿಲ್ಪಿಯೇ ಶಿಕ್ಷಕ. ಸುಂದರ ಶಿಲ್ಪಾಕೃತಿಗಳು ಶಿಕ್ಷಣದ ಮೂಲಕ ಹೊರಹೊಮ್ಮಿಸುವವನೇ ಶಿಕ್ಷಕ.


ಆಗ ಜೀವನವೇ ಸಾರ್ಥಕ. ಆದರ್ಶಗಳನ್ನು ಪಾಲಿಸುವುದು ನಮ್ಮ ನಾಳೆಗೆ ಆದ್ಯ ಕರ್ತವ್ಯ ವೆಂಬ ಕಿವಿಮಾತಿನೊಂದಿಗೆ. ಸರ್ವ ಶಿಕ್ಷಕರಿಗೂ ನನ್ನೀ ಬರಹ ಅರ್ಪಣೆಗೈಯ್ಯುತ್ತಿದ್ದೇನೆ…

ಬರಹ: ಆಮಿರ್ ಬನ್ನೂರು

Related Articles

Latest Articles