Monday, September 16, 2024

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ – ರಮ್ಯಚೇತನ್

ನವ ತರುಣರಿಗೆ ಹೊಸ
ಅರಿವಿನ ಚೈತನ್ಯವನಿತ್ತ
ಮಹಾನ್ ಚೇತನ
ಹಿಂದೂ ಧರ್ಮದ ಕೀರ್ತಿಯನ್ನು
ಸಂಸ್ಕಾರ ಸಂಸ್ಕೃತಿಯ ಪತಾಕೆಯನ್ನು
ಜಗತ್ತಿನೆಲ್ಲೆಡೆ ರಾರಾಜಿಸುವಂತೆ ಮಾಡಿದ
ದಿವ್ಯಚೇತನ.
ಸನ್ಯಾಸ ದೀಕ್ಷೆ ತೊಟ್ಟು ಪಟ್ಟುಬಿಡದೆ
ಏಳಿ ಎದ್ದೇಳಿ ಎಚ್ಚರಗೊಳ್ಳಿರಿ ಎಂಬ
ಧ್ಯೇಯ ವಾಕ್ಯದಿಂದ ಜನರನ್ನು
ಎಚ್ಚರಗೊಳಿಸಿದ ಉತ್ಸಾಹದ ಚಿಲುಮೆಯ ನುಡಿಗಳೇ ನಿತ್ಯನೂತನ.
ಇವರೇ ನಮ್ಮ ವೀರ ಸನ್ಯಾಸಿ ನಾಮಾಂಕಿತ ಜಗತ್ತಿಗೆ ಧರ್ಮದ
ಸಂದೇಶವನ್ನು ಸಾರಿದ ಸ್ವಾಮಿ ವಿವೇಕಾನಂದರೆಂಬ ದಿವ್ಯಕಿರಣ.

ಒಂದುಗೂಡಿ ಬಾಳಿ, ಸಮರಸತೆ ಸಾಧಿಸಿ, ದೀನ ಜನಸ್ತೋಮದ ಸೇವೆಯ ಕೈಂಕರ್ಯ ನಿಮ್ಮದಾಗಲಿ. ಭಾರತದ ಧರ್ಮಾಧಾರಿತ , ಸರ್ವಜೀವ ಸಮನ್ವಯ ತತ್ವಸಿದ್ಧಾಂತದ ಬೆಳಕಿನಲ್ಲಿ ಮಾತ್ರ ಪಾಶ್ಚಾತ್ಯ ಜಗತ್ತಿನ ಅಂದಿನ ಮತಾಂಧತೆ ಪಶ್ಚಿಮವೇ ಶ್ರೇಷ್ಠ ಈಸಾಯಿ ಮತವೇ ತಾರಕ ಮುಂತಾದ ಅಸಂಬದ್ಧಗಳು ಪರಿಹಾರವಾದಿತೆಂದು ಆತನುಡಿದದ್ದು ಭವಿಷ್ಯ ವಾಣಿಯೋ ಎಂಬಂತೆ ಇಂದಿನ ಪಾಶ್ಚ್ಯಾತ್ಯ ಜಗತ್ತಿನ ಭಯೋತ್ಪಾದನೆ, ರಾಜಕೀಯ ಸಾಮಾಜಿಕ ಸ್ಪರ್ಧೆಗಳಿಗೂ ಅವರ ಉಪಾಯವೇ ಏಕಮಾತ್ರ ಪರಿಹಾರವೆಂಬುದು ಸ್ಪಷ್ಟವಾಗುತ್ತಿದೆ.ಒಟ್ಟಾರೆ ಅವರು ಅಂದು ಪಶ್ಚಿಮ ದೇಶಗಳಲ್ಲಿ ಹಾರಿಸಿದ್ದು ಹಿಂದೂ ಧರ್ಮದ ಧ್ವಜವನ್ನೇ ಅವರೇ ಸನಾತನ ಧರ್ಮವನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದ.

ಅವರ ಹುಟ್ಟು ಹೆಸರು ನರೇಂದ್ರ .ಊರು ಕೊಲ್ಕತ್ತಾ. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಹೆಸರಾಂತ ಮನೆತನದ ಕುಡಿ ಆತ. ಶಿವಭಕ್ತ ವಂಶ ಹುಟ್ಟಿದ್ದೇ ಆತ ಶಿವನ ಅನುಗ್ರಹದಿಂದ ಜನವರಿ 12 1863 ರಂದು.30 ವರ್ಷಗಳ ನಡು ಹರೆಯದಲ್ಲೇ ‘ವಿವೇಕಾನಂದ’ ಹೆಸರು ವಿಶ್ವವಿಖ್ಯಾತಗೊಂಡಿತ್ತು. ಆತ ವಿಶ್ವದ ವಿಜಯ ಸಾಧಿಸಿದ್ದ. ಆನಂತರ ಆತನ ಪ್ರಭೇ ಮತ್ತೊಂದು ಮಸುಕಾಗಲಿಲ್ಲ. ದಿನ ದಿನಕ್ಕೂ ಆತನ ಖ್ಯಾತಿ, ಪ್ರಭಾವ ಹೆಚ್ಚುತಲೇ ಬಂತು. ಆತ ಭಾರತೀಯರಿಗೆ ನೀಡಿದ್ದು ಮುಖ್ಯವಾಗಿ ಆತ್ಮನಿರ್ಭರತೆಯ ಸಂದೇಶ. ಇವರು ಭರತ ಖಂಡಕ್ಕೆ ತನ್ನ ತನವನ್ನು ನೀಡಿದರು. ಹಿಂದೂ ಧರ್ಮಕ್ಕೆ ನಿರ್ದಿಷ್ಟ ರೂಪವನ್ನು ಕೊಟ್ಟರು . ವಿಶ್ವಧರ್ಮಕ್ಕೆ ಒಂದು ತಳಹದಿಯನ್ನು ಹಾಕಿದರು. ಮಾನವನ ಶ್ರೇಷ್ಠತೆಯನ್ನು ಎತ್ತಿ ಸಾರಿ ಅವರ ಕೀಳರಿಮೆಯನ್ನು ಹೋಗಲಾಡಿಸಿದರು.

ಜಗತ್ತಿನ ಚಿಂತನಾಧಾರೆಯ ಮೇಲೆ ನಿರ್ದಿಷ್ಟ ಪ್ರಭಾವವನ್ನು ಬೀರಿದರು. ಆಧ್ಯಾತ್ಮಿಕ ತಳಹದಿಯನ್ನು ಆದರಿಸಿದ ಹೊಸ ನೀತಿ ತತ್ವವನ್ನು ಪ್ರತಿಪಾದಿಸಿದರು. ಯುವಜನತೆಗೆ ಒಂದು ಸ್ಪೂರ್ತಿಯ ಸೆಲೆಯಾಗಿ ನಿಂತರು. ಮತ್ತು ಭವಿಷ್ಯತ್ತಿನ ಭವ್ಯ ಆದರ್ಶವನ್ನಿಟ್ಟುಕೊಂಡು ಭವಿಷ್ಯ ಜನಾಂಗ ಮುಂದುವರೆಯುವಂತೆ ಮಾಡಿದರು. ಹಿಂದೂ ಧರ್ಮದ ಬಗ್ಗೆ ಪಾಶ್ಚಿಮಾತ್ಯ ಜಗತ್ತಿಗೆ ಜ್ಞಾನೋದಯ ಮಾಡಿದ ಕೀರ್ತಿ ಅವರದು ಪ್ರಭಾವಿ ವ್ಯಕ್ತಿತ್ವ. ಅವರು 1893ರಲ್ಲಿ ಚಿಕಾಗೋದಲ್ಲಿ ನಡೆ ನಡೆದ ಧರ್ಮಗಳ ಸಂಸತ್ತಿನಲ್ಲಿ ಹಿಂದೂ ಧರ್ಮವನ್ನು ಪ್ರತಿಪನಿಧಿಸಿದರು.

ವಿದೇಶಿಗರಿಗೆ ನಮ್ಮ ರಾಷ್ಟ್ರದ ಶ್ರೇಷ್ಠತೆ ಬಗ್ಗೆ ತಿಳಿಸಿಕೊಟ್ಟರು. ಭಾರತದ ಮಣ್ಣೇ ನನಗೆ ಪವಿತ್ರ, ಅದರ ಗಾಳಿಯೇ ನನಗೆ ಪವಿತ್ರ ಅದೇ ನನ್ನ ತೀರ್ಥಕ್ಷೇತ್ರ, ಮಾತೃಭೂಮಿಯಾದ ಭಾರತವೇ ನನ್ನ ದೇವರು ಎಂದು ಹೇಳಿದರು. ತಮ್ಮ ಭಾಷಣದಲ್ಲಿ ವಿದೇಶಿಯರನ್ನು “ಅಮೆರಿಕಾದ ನನ್ನ ಸಹೋದರ ಸಹೋದರಿಯರೇ…” ಎಂದು ಸಂಬೋಧಿಸುವ ಮೂಲಕ ಅಲ್ಲಿ ನೆರೆದಿದ್ದ ಏಳು ಸಹಸ್ರ ಜನರಿಂದ ಚಪ್ಪಾಳೆಯ ಸುರಿಮಳೆ ಗಳಿಸಿಕೊಂಡರು. ಈ ಮೂಲಕ ಇಡೀ ಜಗತ್ತಿಗೆ ವಿಶ್ವ ಸಹೋದರತೆ , ಮತಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಾರಿ ಹೇಳಿದರು.

ಸ್ವಾಮಿ ವಿವೇಕಾನಂದರು ತಮ್ಮ ಗುರುಗಳಾದ ರಾಮಕೃಷ್ಣರ ಸಂದೇಶವನ್ನು ಪ್ರಚಾರ ಮಾಡಲು 1897ರಲ್ಲಿ ಕಲ್ಕತ್ತಾದ ಬೇಲೂರಿನಲ್ಲಿ ರಾಮಕೃಷ್ಣ ಮಿಷನ್ ಪ್ರಾರಂಭಿಸಿದರು.ನಂತರ ದೇಶವಿದೇಶಗಳಲ್ಲಿ ಇದರ ನೂರಾರು ಶಾಖೆಗಳು ಆರಂಭವಾದವು. ವಿವೇಕಾನಂದರು ಯುವಕರೇ ನಿಜವಾದ ಸಂಪತ್ತು ಎಂದು ತಿಳಿಸಿದರು.”ಏಳಿ ಎದ್ದೇಳಿ ಎಚ್ಚರವಾಗಿರಿ ಗುರಿ ಮುಟ್ಟುವ ತನಕ ನಿಲ್ಲದಿರಿ “ಎಂದು ಕರೆ ನೀಡಿದರು. ಯುವಕರು ಅನಕ್ಷರತೆ , ಅನಾಚಾರ, ಬಡತನ ಮೊದಲಾದವುಗಳನ್ನು ನಿವಾರಿಸಲು ಪಣತೊಡಬೇಕೆಂದು ಕರೆ ನೀಡಿದರು. ಮೊದಲು ವಿದ್ಯೆ ಕಲಿಯಬೇಕು ರಾಷ್ಟ್ರದ ಅಭಿವೃದ್ಧಿಗೆ ಬೇಕಾದ ಶಾಂತಿ , ಧೈರ್ಯ, ಶಕ್ತಿ ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಭಾರತದ ಪ್ರಗತಿಗೆ ಸದಾ ಕ್ರಿಯಾಶೀಲರಾಗಿ ಇರಬೇಕೆಂದರು. ನಿಸ್ಸಂದೇಹವಾಗಿ ಸ್ವಾಮಿ ವಿವೇಕಾನಂದರ ಬೋಧನೆಗಳು ಯುವಕರನ್ನು ಮಾತ್ರವಲ್ಲ ಇಡೀ ಜಗತ್ತನ್ನೇ ಪ್ರೇರೇಪಿಸಿತು . ಅವರು ರಾಷ್ಟ್ರವಾಗಿ ಭಾರತದ ಏಕತೆಗೆ ನಿಜವಾದ ಅಡಿಪಾಯ ಹಾಕಿದರು.
“ವೀರ ಸನ್ಯಾಸಿ ವಿವೇಕಾನಂದ “ಎಂಬ ಶಿರೋನಾಮೆಯಲ್ಲೀ ವಿವೇಕಾನಂದರೆಂಬ ಸನ್ಯಾಸಿಗಳನ್ನು ‘ ವೀರ ಸನ್ಯಾಸಿ’ ಎಂದು ಕರೆಯಲಾಗಿದೆ. ವಿವೇಕಾನಂದರು ಸನ್ಯಾಸಿಗಳಲ್ಲಿ ವೀರಗ್ರಣಿಗರು . ಈ ಸತ್ಯವನ್ನು ಅವರ ಜೀವನದಲ್ಲಿ ನಾವೇ ಕಂಡುಕೊಳ್ಳಬಹುದು ಆದ್ದರಿಂದ ವೀರಸನ್ಯಾಸಿ ಎಂಬ ವಿಶೇಷಣ ನೇರವಾಗಿ ವಿವೇಕಾನಂದರಿಗೆ ಅನ್ವಯವಾಗುತ್ತದೆ.

ಏಳು ಮೇಲೇಳೇಳು ಸಾಧುವೆ ಹಾಡು ಚಾಗಿಯ ಹಾಡನು ಹಾಡಿನೆಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು.
ಧ್ಯಾನ, ಜಪ, ತಪ ತನ್ಮೂಲಕ ಆತ್ಮ ಸಾಕ್ಷಾತ್ಕಾರ. ಹೊರಗಿನ ಜಂಜಾಟ , ಆಕರ್ಷಣೆ ತ್ಯಜಿಸಿ ನಿರಂತರ ಸಾಧಕರಾಗಿ ಸಾಧನೆಯಲ್ಲೇ ಮುಳುಗಿತೇಲಿ,ಸಾಕ್ಷಾತ್ಕಾರ ಪಡೆಯುವುದೇ ಆಗಿತ್ತು. ಸನ್ಯಾಸ ಎಂದರೆ ಎಲ್ಲವನ್ನು ತ್ಯಜಿಸಿ ಧ್ಯಾನಕ್ಕೆ ಕುಳಿತುಕೊಳ್ಳುವುದಲ್ಲ ಫಲಾಪೇಕ್ಷೆ ಮತ್ತು ಸ್ವಾರ್ಥವನ್ನು ತ್ಯಜಿಸುವುದು .ಕೇವಲ ಧ್ಯಾನ ತಪಸ್ಸುಗಳಲ್ಲಿ ಲೀನವಾಗದೆ.ಬದಲಿಗೆ ಯುವಶಕ್ತಿಯನ್ನು ಕಾರ್ಯೋನ್ಮುಖಗೊಳಿಸುವುದರಲ್ಲಿ ಮಗ್ನರಾದರು. ಜಾತಿಯ ಕ್ರೌರ್ಯ ಮೌಢ್ಯಗಳ ಆಚರಣೆಯಿಂದ ಹೊರಬರಬೇಕು ಎಂದು ಬಲವಾಗಿ ಪ್ರತಿಪಾದಿಸಿದರು.ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಎಂದು ತಿಳಿಸಿದರು .ಸನಾತನ ಧರ್ಮದ ತಿರುಳನ್ನು ಸಮಾಜಕ್ಕೆ ಮುಟ್ಟುವಂತೆ ಮಾಡಿದರು.

ಹೀಗೆ ಸ್ವಾಮಿ ವಿವೇಕಾನಂದರು ಎಂದೆಂದಿಗೂ ಹಳತಾಗದ ಚಿರನೂತನ ಸಂದೇಶದೊಂದಿಗೆ ಎಂದೆಂದಿಗೂ ಪ್ರಸ್ತುತವಾಗಿಯೇ ಉಳಿದಿದ್ದಾರೆ .ಅವರು ಆಶ್ರಯಸಿದ ಸನಾತನ ಸತ್ಯದಂತೆ ಚಿರಶಾಶ್ವತ ಆದರ್ಶ ಪ್ರಾಯ ವ್ಯಕ್ತಿಯಾಗಿ ಬೆಳಗುತ್ತಿದ್ದಾರೆ. ದಿನಗಳೆದಂತೆಲ್ಲ ಅವರ ವ್ಯಕ್ತಿತ್ವದ ಹೊಸ ಹೊಸ ಮುಖಗಳು, ಅವರ ಸಂದೇಶದ ಹೊಸ ಹೊಸ ಅಂಶಗಳ ಬೆಳಕಿಗೆ ಬರುತ್ತಾ .ಅವರು ಕಾಲಾತೀತ ವ್ಯಕ್ತಿಯಾಗಿ ಮೆರೆಯುತ್ತಿದ್ದಾರೆ.

ಇವರ ಸಂಕಲ್ಪ ಶಕ್ತಿ ಆಲೋಚನ ಶಕ್ತಿ ಆಧ್ಯಾತ್ಮ ಆತ್ಮಸ್ಥೈರ್ಯ ಇತ್ಯಾದಿ ವಿಸ್ತರಣೆಯಾಗಿದೆ. ಅವರು ತಮ್ಮ ಚಿಕ್ಕ ವಯಸ್ಸಿನಿಂದ ಜೀವಿತಾವಧಿಯವರೆಗೆ ಅನುಸರಿಸಿದ ಮಾರ್ಗವನ್ನು ಯುವ ಜನರು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತಾರೆ .ಸ್ವಾಮೀಜಿಯವರು ಇಂದು ಕೋಟ್ಯಾಂತರ ದೇಶವಾಸಿಗಳಿಗೆ ಮಾರ್ಗದರ್ಶಕರು ಮತ್ತು ಸ್ಪೂರ್ತಿಯ ಮೂಲವಾಗಿದ್ದಾರೆ .ಅವರನ್ನು ವಿದೇಶಗಳಲ್ಲಿಯೂ ಇಷ್ಟಪಡುತ್ತಾರೆ. ಇವರ ವಿಚಾರಧಾರೆ ವಿದೇಶಗಳಲ್ಲಿಯೂ ಹಬ್ಬಿದೆ.

ಭಾರತದ ಯುವಕರನ್ನು ಪ್ರಚೋದಿಸುತ್ತಾ ಮಾಡುತ್ತಾ ಸಾಗಿದ್ದ ಸ್ವಾಮಿ ವಿವೇಕಾನಂದರು ಜುಲೈ 4 1902 ರಂದು ಕಲ್ಕತ್ತಾದ ಬೇಲೂರು ಮಠದಲ್ಲಿ ಧ್ಯಾನ ಮಾಡುತ್ತಾ ಕೊನೆಯುಸಿರೆಳೆದರು ಹೇಳಿದರು. ಅವರನ್ನು ಭಾರತದ ಆಧ್ಯಾತ್ಮ ಪಿತಾಮಹ, ವೇದಾಂತ ಕೇಸರಿ ಎಂದು ಗುರುತಿಸಲಾಗಿದೆ .ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುತ್ತದೆ. ವಿವೇಕಾನಂದರ ಮಾತುಗಳು ಇಂದಿಗೂ ಲಕ್ಷಾಂತರ ಯುವಕರಿಗೆ ಸರಿದಾರಿಯಲ್ಲಿ ಸಾಗಲು ದಾರಿ ತೋರಿಸುತ್ತದೆ.

✍ರಮ್ಯಚೇತನ್

Related Articles

Latest Articles