ಮರವೊಂದರಲ್ಲಿ ಕೈಗಳನ್ನು ಬಟ್ಟೆಯಿಂದ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಬಿಜೆಪಿ ಮುಖಂಡನ ಶವ ಪತ್ತೆಯಾಗಿದೆ.
ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಮುಖಂಡ ಸುಭದೀಪ್ ಮಿಶ್ರಾ ಅಲಿಯಾಸ್ ದೀಪು ಮಿಶ್ರಾ ಮೃತದೇಹ ನಿಧಿರಾಂಪುರ ಗ್ರಾಮದಲ್ಲಿ ಪತ್ತೆಯಾಗಿದೆ.
ಈ ಹತ್ಯೆಯ ಹಿಂದೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸದಸ್ಯರ ಕೈವಾಡವಿದೆ ಎಂದು ಆರೋಪಿಸಿ ಬಿಜೆಪಿಯು ಮುಂದೆ ಬಂದಿದ್ದು, ಸಿಬಿಐ ತನಿಖೆಗೆ ಆಗ್ರಹ ಮಾಡಿದೆ.
ಏಳು ದಿನಗಳ ಹಿಂದೆ ಮನೆ ಬಿಟ್ಟು ಬೇರೆಡೆ ವಾಸ ಆರಂಭಿಸಿದ್ದ ಸುಭದೀಪ್ ಮಂಗಳವಾರ ಮನೆಗೆ ಮರಳಿದ್ದಾರೆ ಎಂದು ವರದಿಯಾಗಿದೆ. ಸುಭದೀಪ್ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಕೊಲೆಯ ಹಿಂದೆ ಮಹಿಳೆಯ ಕುಟುಂಬದ ಸದಸ್ಯರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ವೇಳೆ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲು ಮುಂದಾದಾಗ ಸ್ಥಳೀಯರು ಪ್ರತಿಭಟನೆ ನಡೆಸಿ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಸುಭಾದೀಪ್ ಅವರ ಸಾವು ರಾಜಕೀಯ ಕೊಲೆ ಎಂದು ಬಿಜೆಪಿ ಆರೋಪಿಸಿದೆ. ಈ ವರ್ಷದ ಆರಂಭದಲ್ಲಿ, ಸುಭದೀಪ್ ಮಿಶ್ರಾ ಅವರು ಬಿಜೆಪಿ ಪಕ್ಷದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.