ದಕ್ಷಿಣ ಕನ್ನಡ: ಸುರತ್ಕಲ್‌ನ ಜೋಕಟ್ಟೆ ಕೆಬಿಎಸ್ ನಿವಾಸಿ ಇರ್ಶಾದ್ (33) ಸೌದಿ ಅರೇಬಿಯಾದಲ್ಲಿ ಹೃದಯಾಘಾತಕ್ಕೊಳಗಾಗಿ ಗುರುವಾರ ಬೆಳಗ್ಗೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಜೋಕಟ್ಟೆ ಕೆಬಿಎಸ್ ನಿವಾಸಿ ಅಬ್ದುಲ್ ರಝಾಕ್ ಅವರ ಮಗ ಇರ್ಶಾದ್ 7 ವರ್ಷಗಳಿಂದ ಸೌದಿ ಅರೆಬಿಯಾದ ಅಲ್ ಕೋಬರ್‌ನಲ್ಲಿ ಇಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದರು. ಇತ್ತೀಚೆಗೆ ಒಂದೂವರೆ ವರ್ಷಗಳ ಹಿಂದೆ ಊರಿಗೆ ಬಂದು ಮತ್ತೆ ಸೌದಿ ಅರೆಬಿಯಾಕ್ಕೆ ತೆರಳಿದ್ದರು.
ನ. 2 ರ ಬೆಳಗ್ಗೆ ಭಾರತೀಯ ಕಾಲ ಮಾನ 9:30ರ ವೇಳೆಗೆ ಇರ್ಶಾದ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರ ಸ್ನೇಹಿತರು ಅಲ್ ಕೋಬರ್ ನ ಅಲ್ ಸಲಾಮ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇರ್ಶಾದ್ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾಗಿ ಘೋಷಿಸಿದರು ಎಂದು ಅವರ ಕುಟುಂಬ ಮೂಲಗಳು ಮಾಹಿತಿ ನೀಡಿದೆ.
ಬೆಳಗ್ಗೆ 9.30ರ ಸುಮಾರಿಗೆ ಸಹೋದರ ಇಮ್ರಾನ್ ಅವರಿಗೆ ವೀಡಿಯೊ ಮಾಡಿದ್ದ ಇರ್ಶಾದ್, ಅನಾರೋಗ್ಯವಿದ್ದು ಊರಿಗೆ ಬರುವುದಾಗಿ ಹೇಳಿದ್ದ. ಊರಿಗೆ ಬಂದು ಚಿಕಿತ್ಸೆ ಪಡೆಯುವ ಕುರಿತು ಸಹೋದರನ ಜೊತೆ ಸಮಾಲೋಚನೆಯನ್ನೂ ಮಾಡಿದ್ದ. ಎಲ್ಲರೊಂದಿಗೂ ವೀಡಿಯೊ ಕಾಲ್ ನಲ್ಲಿ ಮಾತನಾಡಿ ಕರೆ ಕಟ್ ಮಾಡಿದ್ದ. ಆದರೆ, ಕರೆ ಕಟ್ ಮಾಡಿದ ಅರ್ಧಗಂಟೆಯ ಬಳಿಕ ಸುಮಾರು 10ಗಂಟೆಯ ಸುಮಾರಿಗೆ ಆತನಿಗೆ ಹೃದಯಘಾತ ಸಂಭವಿಸಿ ಮೃತಪಟ್ಟಿರುವುದಾಗಿ ಸೌದಿ ಅರೆಬಿಯಾದಿಂದ ಕರೆ ಬಂತು ಎಂದು ಸಹೋದರ ಇಮ್ರಾನ್ ಮಾಹಿತಿ ನೀಡಿದ್ದಾರೆ.
ಮೃತ ಇರ್ಶಾದ್ ವಿವಾಹಿತರಾಗಿದ್ದು, ಪತ್ನಿ, ತಂದೆ, ತಾಯಿ, ಮೂವರು ಸಹೋದರರು, ನಾಲ್ಕು ಮಂದಿ ಸಹೋದರಿಯನ್ನು ಅಗಲಿದ್ದಾರೆ. ಇರ್ಶಾದ್ ಅವರ ಮೃತದೇಹ ಸೌದಿ ಅರೆಬಿಯಾದ ಅಲ್ ಕೋಬರ್ ನ ಅಲ್ ಸಲಾಮ್ ಆಸ್ಪತ್ರೆಯಲ್ಲಿದ್ದು, ಶುಕ್ರವಾರ ಜುಮಾ ನಮಾಝಿನ ಬಳಿಕ ಅಲ್ ಕೋಬರ್ ನ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಅವರ ಸಹೋದರ ಇಮ್ರಾನ್ ಮಾಹಿತಿ ನೀಡಿದ್ದಾರೆ.