Sunday, October 13, 2024

ಪಟ್ಟು ಸಡಿಲಿಸದ ಸುಮಲತಾ ಅಂಬರೀಶ್; ಇನ್ನೂ ಕುತೂಹಲ ಮೂಡಿಸಿದ ಸಂಸದರ ನಡೆ..! ಬಿಜೆಪಿಯಿಂದ ಸ್ಪರ್ಧಿಸುತ್ತಾರಾ?

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಡೀ ರಾಜ್ಯದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಕಾರಣ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿ ವಿಜಯಶಾಲಿಯಾಗಿದ್ದು. ಈ ಬಾರಿಯೂ ಮತ್ತೆ ಮಂಡ್ಯ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸುಮಲತಾ ಕೊನೆಯ ಹಂತದಲ್ಲೂ ಪ್ರಯತ್ನ ಮುಂದುವರಿಸಿದ್ದಾರೆ. ಇಂದು ಮತ್ತೆ ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಈ‌ ಬಾರಿಯೂ ರಾಜ್ಯದ ಚಿತ್ತ ಮಂಡ್ಯದತ್ತ ಮೂಡಿದೆ.

ಮಂಡ್ಯದಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್​ ನಡೆ ಯಾವ ಕಡೆ ಅನ್ನುವುದುದು ಕುತೂಹಲ ಕೆರಳಿಸಿದೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರವನ್ನ ಕಮಲಾಧಿಪತಿಗಳು ದಳಪತಿಗಳಿಗೆ ಬಿಟ್ಟು ಕೊಟ್ಟಿದ್ದಾರೆ ಅಂತ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಸುಮಲತಾ ಮಾತ್ರ ಮಂಡ್ಯ ಬಿಟ್ಟು ಕೊಡಲು ಸುತಾರಾಮ್ ತಯಾರಿಲ್ಲ.

ಈ ಬಾರಿ ಸಕ್ಕರೆ ನಾಡಿನಿಂದ ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕುಮಾರಸ್ವಾಮಿ ಸಕಲ ಸಿದ್ಧತೆ ಮಾಡುತ್ತಿದ್ದಾರೆ. ಇತ್ತ ಮತ್ತೊಮ್ಮೆ ಮಂಡ್ಯ ಅಖಾಡದಿಂದ ಕಣಕ್ಕಿಳಿಯಲು ಕಳೆದ 2 ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟು ಸುಮಲತಾ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಭೇಟಿಯಾಗಿ ಮಾತುಕತೆ ನಡೆಸಿರುವ ಸುಮಲತಾ, ನಾನೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಅಂತ ಮನವಿ ಮಾಡಿದ್ದಾರೆ. ಆದರೆ ಈ ಮನವಿಗೆ ನಡ್ಡಾ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಸಭೆ ನಂತರ ಮಾತನಾಡಿದ ಸುಮಲತಾ ಜೆಡಿಎಸ್​ಗೆ ಮಂಡ್ಯ ಬಿಟ್ಟುಕೊಟ್ರೆ ಜಿಲ್ಲೆಯಲ್ಲಿ ಬಿಜೆಪಿ ತನ್ನ ಸಂಘಟನೆ ಕಳೆದುಕೊಳ್ಳಲಿದೆ. ಜೊತೆಗೆ ನನ್ನ ಬೆಂಬಲಿಗರು, ಕಾರ್ಯಕರ್ತರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುತ್ತೇನೆ ಎಂದಿದ್ದಾರೆ.

ಇಂದು ಅಮಿತ್ ಶಾ ಭೇಟಿಯಾಗಲಿರುವ ಸುಮಲತಾ
ಕೊನೆ ಹಂತದಲ್ಲಿ ಕಸರತ್ತು ನಡೆಸುತ್ತಿರುವ ಸುಮಲತಾ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಅಮಿತ್ ಶಾರನ್ನ ಭೇಟಿ ಮಾಡಿ ಮತ್ತೊಂದು ಬಾರಿ ಮಂಡ್ಯದಿಂದ ಕಣಕ್ಕಿಳಿಯೋ ಬಗ್ಗೆ ಬಿಜೆಪಿ ನಾಯಕರ ಮನವೊಲಿಸುವ ವಿಶ್ವಾಸದಲ್ಲಿದ್ದಾರೆ.

ಆದರೆ ಈಗಾಗಲೇ ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟು ಕೊಟ್ಟಿರುವ ಬಿಜೆಪಿ ಹೈಕಮಾಂಡ್, ಸುಮಲತಾರನ್ನ ಯಾವ ರೀತಿ ಶಾಂತಗೊಳಿಸುತ್ತದೆ ಅಂತ ಕಾದು ನೋಡಬೇಕಿದೆ. ಈ ಮಧ್ಯೆ ಸುಮಲತಾ ನಾನು ಬಿಜೆಪಿ ಜೊತೆಗೆ ಇರುತ್ತೇನೆ ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿಯ ಸದಸ್ಯಳಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಒಟ್ನಲ್ಲಿ ಇಂದು ಅಮಿತ್ ಶಾ ಜೊತೆ ನಡೆಯುವ ಸಭೆಯ ನಂತರ ಸುಮಲತಾ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅನ್ನೋ ಕುತೂಹಲ ಜೋರಾಗಿದೆ.

Related Articles

Latest Articles