ಸುಳ್ಯ: ಬಾಲಕನೋರ್ವನ ಜನನಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದು ವಿಕೃತಿ ಮೆರೆದಿದ್ದಾರೆ. ಹಾಸ್ಟೆಲ್ ನಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಿದ್ದ ಬಾಲಕ ಈಗ ಚಿಕಿತ್ಸೆ ಪಡೆಯುವಂತಾಗಿದೆ.
ಸುಳ್ಯದ ಸಂಪಾಜೆಯ ಹಾಸ್ಟೆಲ್ ಒಂದರಲ್ಲಿದ್ದ ಬಾಲಕನ ಜನನಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಕಾರಣ ಏಟಾಗಿ ಊದಿಕೊಂಡಿದೆ. ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷ ವಯಸ್ಸಿನ ಬಾಲಕ ಸಂಪಾಜೆಯ ಹಾಸ್ಟೆಲ್ ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಸೆ.14ರಂದು ರಾತ್ರಿ ಹಾಸ್ಟೆಲ್ ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಗುಪ್ತಾಂಗ ಹಿಡಿದೆಳೆದಿದ್ದರು. ಬಳಿಕ ಮೂತ್ರ ವಿಸರ್ಜನೆ ಮಾಡುವ ವೇಳೆ ಅತೀವ ನೋವು ಉಂಟಾಗಿದೆ. ಇದರಿಂದ ಸಂತ್ರಸ್ತ ಬಾಲಕ ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾನೆ.
ಮೊದಲು ಯಾರೊಡನೆಯೂ ಈ ವಿಚಾರ ಹೇಳಿಕೊಂಡಿರಲಿಲ್ಲ. ಆದರೆ ತೀವ್ರ ನೋವಿನ ಕಾರಣ ಮನೆಗೆ ತೆರಳಿದ್ದು ಈ ವೇಳೆ ಮನೆಯವರ ಗಮನಕ್ಕೆ ಬಂದಿದೆ.
ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರೆಂದೂ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ತಿಳಿದುಬಂದಿದೆ.
ಅಲ್ಲಿ ಚಿಕಿತ್ಸೆ ನೀಡಿ ಸೆ. 20 ರಂದು ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಸಂಪಾಜೆ ಪೊಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.