ದಂಗಲ್ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಸುಹಾಸಿನಿ ಭಟ್ನಾಗರ್ ಫೆಬ್ರವರಿ 17 ರಂದು ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಸುಹಾಸಿನಿ ಅವರು ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಫೆಬ್ರವರಿ 17ರಂದು ನಿಧನ ಹೊಂದಿದ್ದಾರೆ. ಸೂಪರ್ ಹಿಟ್ ಸಿನಿಮಾ ‘ದಂಗಲ್’ನಲ್ಲಿ ಆಮಿರ್ ಖಾನ್ರ ಪುತ್ರಿಯ ಪಾತ್ರದಲ್ಲಿ ನಟಿಸಿದ್ದರು.
ಹರಿಯಾಣಾದ ಫರೀದಾಬಾದ್ನವರಾದ ಸುಹಾಸಿನಿ ಭಟ್ನಾಗರ್ ಸಣ್ಣ ವಯಸ್ಸಿನಲ್ಲಿಯೇ ಹಲವು ಜಾಹೀರಾತುಗಳಲ್ಲಿ ನಟಿಸಿದ್ದರು. ಆಮಿರ್ ಖಾನ್ ನಟನೆಯ ‘ದಂಗಲ್’ ಸಿನಿಮಾನಲ್ಲಿ ಬಬಿತಾ ಪೋಗಟ್ ಎಳೆಯ ವಯಸ್ಸಿನ ಪಾತ್ರದಲ್ಲಿ ನಟಿಸಿದ್ದರು. ‘ದಂಗಲ್’ ಸಿನಿಮಾಕ್ಕೆ ಸುಹಾಸಿಯನ್ನು ಆಯ್ಕೆ ಮಾಡಿದ್ದ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಚಬ್ರಾ ಮಾತನಾಡಿ, ‘11 ಸಾವಿರ ಬಾಲಕಿಯರನ್ನು ಆಡಿಷನ್ ಮಾಡಲಾಗಿತ್ತು. ಅದರಲ್ಲಿ ಸುಹಾಸಿನಿ ಬಬಿತಾರ ಸಣ್ಣ ವಯಸ್ಸಿನ ಪಾತ್ರಕ್ಕೆ ಆಯ್ಕೆ ಆಗಿದ್ದರು’ ಎಂದು ನೆನಪು ಮಾಡಿಕೊಂಡಿದ್ದಾರೆ.
ಸುಹಾಸಿನಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾಲಿಗೆ ಗಾಯ ಮಾಡಿಕೊಂಡಿದ್ದಾಗ ಅವರಿಗೆ ನೀಡಲಾದ ಔಷಧದಿಂದ ಪ್ರತಿಕೂಲ ಪ್ರತಿಕ್ರಿಯೆ ಉಂಟಾಗಿ ಅವರು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಂತೆ. ಕೊನೆಗೆ ಫೆಬ್ರವರಿ 17ರಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.