ವಿಜಯಪುರದಲ್ಲಿ ದಸರಾ ಹಬ್ಬದ ವೇಳೆಯೇ ಕಿಡಿಗೇಡಿಗಳು ದುಷ್ಕೃತ್ಯವೆಸಗಿದ್ದಾರೆ. ಸಿದ್ದೇಶ್ವರ ದೇವಸ್ಥಾನ ಬಳಿಯಿರುವ ಗಣಪತಿ ಚೌಕ್ನಲ್ಲಿ ಪ್ರತಿಷ್ಟಾಪಿಸಿರುವ ಚತುರ್ಮುಖ ಗಣಪನ ಮೂರ್ತಿಗೆ ಕಲ್ಲು ಎಸೆದಿದ್ದಾರೆ. ಪರಿಣಾಮ ಗಣಪತಿ ಮೂರ್ತಿಯ ಸುತ್ತಲೂ ಹಾಕಿರುವ ಪ್ರೊಟೆಕ್ಷನ್ ಗ್ಲಾಸ್ಗಳಿಗೆ ಹಾನಿಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಮನೆ ಮಾಡಿತ್ತು.

ತಡರಾತ್ರಿ ಕಿಡಿಗೇಡಿಗಳು ಈ ಕುಕೃತ್ಯ ಮಾಡಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಮಾಡಲಾಗಿದೆ. ಈಗ ದಸರಾ ಹಬ್ಬದಲ್ಲಿ ಸಹಿಸದ ಕಿಡಿಗೇಡಿಗಳು ಗಣೇಶನ ಮೂರ್ತಿ ಭಗ್ನ ಮಾಡುವ ಯತ್ನ ಮಾಡಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಗಣಪತಿ ಚೌಕ್ನಲ್ಲಿ ಗಣಪನ ಮೂರ್ತಿಗೆ ಕಲ್ಲು ತೂರಿ ಹಾನಿ ಮಾಡಿದ್ದ ವಿಚಾರ ತಿಳಿಯುತ್ತಿದ್ದಂತೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಗಾಂಧಿಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರದೀಪ್ ತಳಕೇರಿ ಹಾಗೂ ಇತರೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ಮಾಡಿದರು. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಫೂಟೇಜ್ ಸಂಗ್ರಹ ಮಾಡಲು ಟೀಂವೊಂದನ್ನು ನಿಯೋಜಿಸಿದರು.