ಕೊಲಂಬೊ: ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಶ್ರೀಲಂಕಾ ತಂಡದ ಮಾಜಿ ಸ್ಪಿನ್ನರ್ ಸುಚಿತ್ರ ಸೇನಾನಾಯಕೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕ್ರೀಡಾ ವಿಭಾಗದ ಅಪರಾಧಗಳ ತನಿಖೆ ನಡೆಸುತ್ತಿರುವ ಘಟಕವು ಸೇನಾನಾಯಕೆಯನ್ನು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದೇವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಅವರು ಲಂಕನ್ ಪ್ರೀಮಿಯರ್ ಲೀಗ್‌ನಲ್ಲಿ ಪಂದ್ಯ ಹೊಂದಾಣಿಕೆ ಮಾಡುವಂತೆ ಇಬ್ಬರು ಆಟಗಾರರ ಮೇಲೆ ಪ್ರಭಾವ ಬೀರಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಬಂಧನ ನಡೆದಿದೆ. ಮ್ಯಾಚ್ ಫಿಕ್ಸಿಂಗ್ (ಕಳ್ಳಾಟ) ಶ್ರೀಲಂಕಾದಲ್ಲಿ ಕ್ರಿಮಿನಲ್ ಅಪರಾಧವಾಗಿದೆ.
ಸೇನಾನಾಯಕೆ 74 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 2016ರಲ್ಲಿ ಕೊನೆಯ ಬಾರಿ ಶ್ರೀಲಂಕಾಕ್ಕೆ ಆಡಿದ್ದರು. ಕಳೆದ ತಿಂಗಳು, ಪೊಲೀಸ್ ವಿಚಾರಣೆಯ ವೇಳೆ ನ್ಯಾಯಾಲಯವೊಂದು ಅವರ ಪಾಸ್‌ಪೋರ್ಟ್ ಸ್ವಾಧೀನಕ್ಕೆ ಸೂಚಿಸಿತ್ತು.
ಅವರು ಮಾಡಿದ ತಪ್ಪು ಸಾಬೀತಾದಲ್ಲಿ 10 ವರ್ಷಗಳ ಕಾಲ ಜೈಲು ಶಿಕ್ಷೆ ಅಥವಾ 10 ಕೋಟಿ ರೂಪಾಯಿ ತೆರಬೇಕಾಗುತ್ತದೆ ಅಥವಾ ಎರಡನ್ನೂ ಅವರಿಗೆ ವಿಧಿಸಲಾಗುತ್ತದೆ.
ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಪಿಡುಗು ವ್ಯಾಪಕವಾಗಿದೆ ಎಂದು 2021 ರಲ್ಲಿ ಆಗಿನ ಕ್ರೀಡಾ ಸಚಿವ ಮಹಿಂದಾನಂದ ಅಲುತಗಾಮಗೆ ಸಂಸತ್ತಿಗೆ ತಿಳಿಸಿದ್ದರು.
With input from Prajavani