Tuesday, March 18, 2025

ಗುಜರಾತ್: ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್ ಡಿಕ್ಕಿ ; ಇಬ್ಬರು ಸ್ಥಳದಲ್ಲೇ ಮೃತ್ಯು

ಸೂರತ್: ಕಾಲ್ನಡಿಗೆ ಜಾಥಾದ ವೇಳೆ ವಿಶ್ರಾಂತಿ ಪಡೆಯುತ್ತಿದ್ದಾಗ ಟ್ರಕ್‌ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ‌ ನಡೆದಿದೆ. ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ಐವರು ವಿರಾಮದ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಗುಜರಾತ್ ನ ಸೂರತ್ ನಿಂದ 200 ಕಿ.ಮಿ. ದೂರದಲ್ಲಿ ಬುಧವಾರ ಮಧ್ಯಾಹ್ನ 2ರ ಸುಮಾರಿಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರನ್ನು ಲಿಂಗೇಗೌಡ ಎನ್ನಲಾಗಿದೆ.

ದಾರಿ ಮಧ್ಯೆ ರಸ್ತೆ ಬದಿ ಕಾರಿನಲ್ಲಿದ್ದಾಗ ಟ್ರಕ್ ಢಿಕ್ಕಿ ಹೊಡೆದು, ಮೂಸಾ ಶರೀಫ್, ಲಿಂಗೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದು ಟ್ರಕ್ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಕೆಆರ್‌ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಮೂಸಾ ಶರೀಫ್ ಕರ್ನಾಟಕ ಸಾರಥಿಗಳ ಟ್ರೇಡ್ ಯೂನಿಯನ್ ಮುಖಂಡರು. ದೇಶದಲ್ಲಿ ನಡೆಯುತ್ತಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಮಧ್ಯೆ ಕಳವಳಕಾರಿಯಾಗಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಐವರು ಕಾಲ್ನಡಿಗೆ ಜಾಥಾ ಹೊರಟಿದ್ದರು.

Related Articles

Latest Articles