Tuesday, January 21, 2025

ಅರ್ಥಪೂರ್ಣವಾಗಿ ವಿಂಶತಿ ಆಚರಿಸುತ್ತಿರುವ ಶ್ರೀ ದುರ್ಗಾ ಫ್ರೆಂಡ್ಸ್ (ರಿ.) ಉಳ್ಳಾಲ

ಉಳ್ಳಾಲ : ಇಲ್ಲಿನ ಶಾರದೋತ್ಸವಕ್ಕೆ ಹುಲಿವೇಷ ರಂಜನೆ ನೀಡುವ ಉದ್ದೇಶದಿಂದ ಪ್ರಾರಂಭವಾದ ಶ್ರೀ ದುರ್ಗಾ ಫ್ರೆಂಡ್ಸ್ ಉಳ್ಳಾಲ ತಂಡವು ಈ ವರ್ಷ 20 ವರ್ಷಗಳನ್ನು ಪೂರೈಸುತ್ತಿದ್ದು ವಿಶಂತಿ ಉತ್ಸವದ ಸಂಭ್ರಮದಲ್ಲಿದೆ. ಅಕ್ಟೋಬರ್ ತಿಂಗಳಲ್ಲಿ ನಡೆಯುವ ಅದ್ದೂರಿ ಸಮಾರಂಭದ ಪೂರ್ವಭಾವಿಯಾಗಿ ಪ್ರತಿ ತಿಂಗಳು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಈ ಬಾರಿ ಮೇರಮಜಲಿನ ವೃದ್ಧಾಶ್ರಮಕ್ಕೆ ಭೇಟಿಯಿತ್ತು ಸ್ವಚ್ಛತೆ ಮತ್ತು ನೆರವಿನ‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೇರಮಜಲಿನಲ್ಲಿರುವ ಶ್ರೀಮಾತಾ ಲಕ್ಷಣಿ ಶಾಂತಿಧಾಮ ಆಶ್ರಮಕ್ಕೆ ದುರ್ಗಾ ಫ್ರೆಂಡ್ಸ್ ಸದಸ್ಯರು ತೆರಳಿ ಕೊಠಡಿ, ಬೆಡ್, ಪರಿಕರ, ಶೌಚಾಲಯ, ಸುತ್ತಲ ಪರಿಸರವನ್ನು ಶುಚಿಗೊಳಿಸಿದರು. ರಕ್ಷಾಬಂಧನದ ಪ್ರಯುಕ್ತ ಅಲ್ಲಿನ ಆಶ್ರಮವಾಸಿಗಳಿಗೆ ರಕ್ಷೆ ಕಟ್ಟಿ ಬಾಂಧವ್ಯ ವ್ಯಕ್ತಪಡಿಸಿದರು.

ಆನಂತರ ಮಹಿಳೆಯರಿಗೆ 25 ನೈಟಿಗಳನ್ನು, ಪುರುಷರಿಗೆ ಪಂಚೆ, ಬರ್ಮುಡ ವಸ್ತ್ರಗಳನ್ನು ವಿತರಿಸಲಾಯಿತು. ಆಶ್ರಮದ ವಾಸಸೌಲಭ್ಯಕ್ಕಾಗಿ ಹೊಸ 3 ಫ್ಯಾನ್‌ಗಳನ್ನು‌ ಅಳವಡಿಸಲಾಯಿತು. ನಿತ್ಯ ಉಪಯೋಗಕ್ಕಾಗಿ 80 ಕೆಜಿ ಅಕ್ಕಿಯನ್ನು ನೀಡಲಾಯಿತು.

ತಂಡದ ಸದಸ್ಯರು ಆಶ್ರಮವಾಸಿಗಳಿಗೆ ಬೆಳಿಗ್ಗಿನ ಉಪಾಹಾರ ವ್ಯವಸ್ಥೆ ಮಾಡಿ ಮಧ್ಯಾಹ್ನವೂ ಅವರ ಜೊತೆ ಕುಳಿತು ಸಹಭೋಜನ ನಡೆಸಿದರು. ಮಂಗಳೂರಿನ ಮಡಿಲು ಸೇವಾ ಟ್ರಸ್ಟ್ ಸದಸ್ಯರು ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.

20ನೇ ವರ್ಷಾಚರಣೆಯ ಪೂರ್ವಭಾವಿಯಾಗಿ ಈಗಾಗಲೇ ‘ಒಂದು ಗಿಡ – ಒಂದು ವಿಶ್ವ’ ಎಂಬ ಪರಿಸರ ಜಾಗೃತಿ, ಧಾರ್ಮಿಕ ಶ್ರದ್ಧಾಕೇಂದ್ರದ ಶುಚೀಕರಣ, ಹಿಂದೂರುದ್ರಭೂಮಿ ಸ್ವಚ್ಛತೆ, ರಕ್ತದಾನ ಶಿಬಿರ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ಮುಂತಾದ ಕಾರ್ಯಕ್ರಮಗಳು ನಡೆದಿದ್ದು ಮೋಜುಮಸ್ತಿಗೆ ವ್ಯರ್ಥವ್ಯಯ ಮಾಡದೆ ಅರ್ಥಪೂರ್ಣವಾಗಿ ವಿಂಶತಿ ಆಚರಿಸುತ್ತಿರುವ ತಂಡದ ಬಗ್ಗೆ ಉಳ್ಳಾಲದ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related Articles

Latest Articles