ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಪ್ರಚಾರ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಸ್ಪರ್ಧಿಸುತ್ತಿದ್ದಾರೆ. ಪತ್ನಿ ಪರ ಶಿವಣ್ಣ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಶಿವರಾಜ್ಕುಮಾರ್ ತಾವು ರಾಹುಲ್ ಗಾಂಧಿ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.
ನಾನು ರಾಹುಲ್ ಗಾಂಧಿ ಅವರ ಫಿಟ್ನೆಸ್ ಹಾಗೂ ಮನುಷ್ಯತ್ವಕ್ಕೆ ದೊಡ್ಡ ಅಭಿಮಾನಿ. ಏಕೆಂದರೆ ದೇಶದ ನಾಯಕರಾದವರು ಮೊದಲು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೈಹಿಕ ಸದೃಢತೆ ಕಾಪಾಡಿಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನು ನೋಡಿದಾಗ ದೈಹಿಕವಾಗಿ ಸದೃಢತೆ ಹೊಂದಿದವರು ದೇಶವನ್ನೂ ಇದೇ ರೀತಿ ಇಟ್ಟುಕೊಳ್ಳುತ್ತಾರೆ ಅನ್ನಿಸುತ್ತದೆ. ರಾಹುಲ್ ಗಾಂಧಿ ಕೂಡ ಪ್ರಧಾನಿಯಾದರೆ ದೇಶವನ್ನು ಫಿಟ್ ಆಗಿಯೇ ಇಡುತ್ತಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿರುವುದು ತುಂಬಾ ಖುಷಿ ನೀಡಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಮಹಾನ್ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನೊಂದಿಗೆ ನಟ ದುನಿಯಾ ವಿಜಯ್ ಕೂಡ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.