ಜನವರಿ 22ರಂದು ಅದ್ಧೂರಿಯಾಗಿ ನಡೆಯಲಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡ ವರದಿ ಪ್ರಕಟಿಸಿದೆ.
ಕಾರ್ಯಕ್ರಮಕ್ಕೆ ದೇಶದ ಹಲವು ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ. ತಮಿಳಿನಿಂದ ರಜನಿಕಾಂತ್, ಮಲಯಾಳಂ ಚಿತ್ರರಂಗದಿಂದ ಮೋಹನ್ ಲಾಲ್, ತೆಲುಗು ಚಿತ್ರರಂಗದಿಂದ ಚಿರಂಜೀವಿ ಅವರಿಗೆ ಆಹ್ವಾನ ನೀಡಲಾಗಿದ್ದು, ಕನ್ನಡಚಲನಚಿತ್ರ ರಂಗದಿಂದ ರಿಷಬ್ ಶೆಟ್ಟಿ ಒಬ್ಬರಿಗೇ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.
ಉಳಿದಂತೆ ಕರ್ನಾಟಕದಿಂದ ಸುಮಾರು 250 ಮಂದಿ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಅದರಲ್ಲಿ ನಟ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಪರವಾಗಿ ಭಾಗಿ ಯಾಗಲಿದ್ದಾರೆ.
‘ಕಾಂತಾರ’ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿ ಹಲವು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ರಿಷಬ್ ಶೆಟ್ಟಿ ಅವರನ್ನು ಈ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ರಾಮ ಮಂದಿರ ಉದ್ಘಾಟನೆ ಯಂತಹ ಮಹತ್ವದ ಕಾರ್ಯಕ್ರಮಕ್ಕೆ ಆಹ್ವಾನ ಬಂದಿರುವುದು ರಿಷಬ್ ಶೆಟ್ಟಿಯವರ ಹೆಗ್ಗಳಿಕೆಯನ್ನು ಹೆಚ್ಚಿಸಿದೆ.