ಮಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನಡೆಸಿದ ವ್ಯಕ್ತಿಯೊಬ್ಬರು ಮನೆಗೆ ತೆರಳಿದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ನಗರದ ಬಿಜೈ ನ್ಯೂ ರೋಡ್ ನಲ್ಲಿರುವ ಫೆಲಿಸಿಟಿ ಅಪಾರ್ಟ್‌ಮೆಂಟ್ ಅಸೋಸಿಯೇಶನ್ ವತಿಯಿಂ ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣವನ್ನು ಅಪಾರ್ಟ್‌ಮೆಂಟ್ ನ ಹಿರಿಯ ನಾಗರಿಕ, ನಿವೃತ್ತ ಸರಕಾರಿ ಅಧಿಕಾರಿ ಅಬ್ದುಲ್ ಸಮದ್ (80) ಅವರು ಧ್ವಜಾರೋಹಣ ನಡೆಸಿದ್ದರು. ನಂತರ ಭಾಷಣವನ್ನೂ ಮಾಡಿದ್ದ ಅವರು ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಲಿಫ್ಟ್ ನಲ್ಲಿ ತೆರಳಿದ್ದರು.
ಮನೆಯ ಒಳಗೆ ಬಂದು ಆಸೀನರಾಗಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣವೇ ಅಕ್ಕಪಕ್ಕದ ನಿವಾಸಿಗಳು ಬಂದು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಅವರ ಪ್ರಾಣ ಹೋಗಿತ್ತು. ಮೂಲತಃ ಕುಂದಾಪುರ ಗಂಗೊಳ್ಳಿ ನಿವಾಸಿಯಾಗಿರುವ ಅವರ ಮೃತದೇಹವನ್ನು ನಂತರ ಊರಿಗೆ ಕೊಂಡೊಯ್ಯಲಾಯಿತು.