Tuesday, January 21, 2025

ದಕ್ಷಿಣ ಕನ್ನಡ: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬ್ಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ – ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು

ದಕ್ಷಿಣ ಕನ್ನಡ: ವ್ಯವಹಾರಕ್ಕೆ ಪಡೆದ ಬ್ಯಾಂಕ್‌ ಸಾಲ ಬಾಕಿ ಇರಿಸಿದ್ದು, ಮರುಪಾವತಿಗಾಗಿ ಮನೆಗೆ ಹೋದ ಬ್ಯಾಂಕ್‌ ಸಿಬ್ಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ ಒಡ್ಡಿದ ಆರೋಪದಡಿ ಇಬ್ಬರ ಮೇಲೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪುತ್ತೂರು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ರಿಲೇಷನ್‌ಶಿಪ್‌ ಮ್ಯಾನೇಜರ್‌ ಚೈತನ್ಯ ಎಚ್‌.ಸಿ. ಅವರು ನೀಡಿದ ದೂರಿನಂತೆ ಅಖಿಲೇಶ್ ಮತ್ತು ಕೃಷ್ಣ ಕಿಶೋರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ಬೊಳುವಾರು ಬಳಿ ತಿರುಮಲ ಹೋಂಡಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಬಲ್ನಾಡು ಗ್ರಾಮದ ಉಜಿರ್ಪಾದೆ ನಿವಾಸಿ ಕೀರ್ತಿ ಎನ್ನುವವರು ಅಖಿಲೇಶ್ ಹೆಸರಿನಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ 2 ಕೋಟಿ ರೂ. ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡದೇ ಎನ್‌ಪಿಎ ಆಗಿತ್ತು.

ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟಿಸ್‌ ಮಾಡಿದ್ದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ ಬ್ಯಾಂಕ್‌ ಸಿಬ್ಬಂದಿ ಆಕಾಶ್‌ ಚಂದ್ರಬಾಬು ಮತ್ತು ದಿವ್ಯಶ್ರೀ ಅವರು ಅಖಿಲೇಶ್ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಅಖೀಲೇಶ್‌ ಅವರು ಮನೆಯಲ್ಲಿರಲಿಲ್ಲ. ಬ್ಯಾಂಕ್‌ನವರು ಬಂದ ವಿಚಾರವನ್ನು ಕೀರ್ತಿ ಅವರು ಪತಿ ಅಖಿಲೇಶ್‌ಗೆ ಕರೆ ಮಾಡಿ ತಿಳಿಸಿದ್ದರು.

ಅಖಿಲೇಶ್ ಅವರು ಮನೆಗೆ ಬಂದು ಬ್ಯಾಂಕ್‌ ಸಿಬ್ಬಂದಿ ಜತೆಗೆ ಮನೆಗೆ ಬಂದಿರುವ ಬಗ್ಗೆ ತಕರಾರು ತೆಗೆದು ಗದರಿಸಿರುವುದು ಮಾತ್ರವಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಬಂದ್‌ ಮಾಡಿ ಬಲವಂತವಾಗಿ ಕೂರಿಸಿದ್ದಾರೆ. ಬಳಿಕ ಕೃಷ್ಣ ಕಿಶೋರ್‌ ಅವರು ಮನೆಗೆ ಬಂದು ದೂರುದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್‌ ತೋರಿಸಿ ಶೂಟ್‌ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಗುರುವಾರ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles