ದಕ್ಷಿಣ ಕನ್ನಡ: ಯುವಕನೊಬ್ಬನನ್ನು ಅಟ್ಟಾಡಿಸಿ ಕೊಲೆಗೈದ ಘಟನೆ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆಯಾದವರು.
ತಡರಾತ್ರಿ ಪುತ್ತೂರಿನ ನೆಹರೂನಗರ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ಗಾನಾ ಪಿ. ಕುಮಾರ್ ಸಹಿತ ಪೊಲೀಸರು ಭೇಟಿ ನೀಡಿದ್ದು, ಬಂದೋಬಸ್ತ್ ಏರ್ಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರಿನ ಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್ ಕಲ್ಲೇಗ ಹತ್ಯೆಯಾದವರು.
ಪುತ್ತೂರಿನ ಅಕ್ಷಯ್ ಕಲ್ಲೇಗ 24ರ ಹರೆಯದವರಾಗಿದ್ದು, ಅಲ್ಲಿನ ವಿವೇಕಾನಂದ ಕಾಲೇಜ್ ಬಳಿ ನಿವಾಸಿಯಾಗಿದ್ದು, ತಂದೆ ಚಂದ್ರಶೇಖರ, ತಾಯಿ ಕುಸುಮ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಅವರು ಕಳೆದ ಸುಮಾರು 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಎಂಬ ಹುಲಿ ವೇಷ ತಂಡವನ್ನು ನಡೆಸುತ್ತಿದ್ದರು. ಪುತ್ತೂರಿನಲ್ಲಿ ಅವರ ತಂಡ ಈ ದಿನಗಳಲ್ಲಿ ಭಾರೀ ಜನ ಪ್ರಿಯತೆಯನ್ನು ಗಳಿಸಿತ್ತು.
ಹುಲಿ ಕುಣಿತದ ಪಂದ್ಯ – ಪಂಥ ಕೂಟಗಳಲ್ಲಿ ಕೂಡಾ ಪ್ರಶಸ್ತಿಗಳನ್ನು ಬಾಚಿತ್ತು. ಈ ತಂಡ ಈ ಮೂಲಕ ಪುತ್ತೂರಿನಲ್ಲಿ ಹುಲಿ ಕುಣಿತ ತಂಡಕ್ಕೆ ಒಂದು ರೀತಿಯ ಸ್ಟಾರ್ ಗಿರಿಯನ್ನು ತಂದುಕೊಟ್ಟಿದ್ದರು.
ಹತ್ಯೆಗೆ ನಿಖರ ಕಾರಣ ಅಸ್ಪಷ್ಟವಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.