ಬೆಂಗಳೂರು: ಹಾಸಿಗೆ ಹಿಡಿದಿರುವ ವೃದ್ಧೆಯನ್ನು ನೋಡಿಕೊಳ್ಳುವ ವಿಚಾರಕ್ಕೆ ಅಪ್ಪ- ಅಮ್ಮನ ನಡುವೆ ಜಗಳ ಶುರುವಾಗಿದ್ದು, ಬಿಡಿಸಲು ಹೋದ ಮಗ ಆಕಸ್ಮಿಕವಾಗಿ ಕೊಲೆಯಾದ ಘಟನೆ ಜರಗನಹಳ್ಳಿಯಲ್ಲಿ ಜೂ.05 ಬೆಳಿಗ್ಗೆ ನಡೆದಿದೆ. ಯಶವಂತ್ (23) ತಂದೆಯಿಂದಲೇ ಕೊಲೆಯಾದ ಪುತ್ರ. ಈ ಕುರಿತು ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಯಶವಂತ್ ಇನ್ಫೋಸಿಸ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಉತ್ತಮ ವ್ಯಕ್ತಿತ್ವ ಹೊಂದಿದ್ದ ಯಶವಂತ ಕೆಲಸ ಮಾಡುತ್ತ, ತಂದೆ ಮಾಡಿದ್ದ ಸಾಲವನ್ನು ತೀರಿಸುತ್ತಿದ್ದ. ಹೀಗಿರುವಾಗ ಆತನ ಅಜ್ಜಿ ಹಾಸಿಗೆ ಹಿಡಿದಿದ್ದಾರೆ. ಆಕೆಯನ್ನು ನೋಡಿಕೊಳ್ಳುವ ವಿಚಾರಕ್ಕೆ ತಂದೆ-ತಾಯಿ ನಡುವೆ ಆಗಾಗ ಜಗಳ ಆಗುತ್ತಿತ್ತು.
ಬೆಳಗ್ಗೆಯೂ ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಜಗಳ ಬಿಡಿಸಲು ಹೋದ ಮಗನನ್ನು ಹೆದರಿಸಲು ತಂದೆ ಅಡುಗೆ ಮನೆಯಿಂದ ಚಾಕು ತಂದು ಇರಿಯಲು ಹೋಗಿದ್ದ. ಆದರೆ, ಆಕಸ್ಮಾತಾಗಿ ಚಾಕು ಯುವಕನ ಎದೆಗೆ ಆಳವಾಗಿ ನಾಟಿ ಪ್ರಾಣ ಹೋಗಿದೆ. ಸದ್ಯ ಆರೋಪಿ ತಂದೆ ಬಸವರಾಜುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.