Wednesday, November 6, 2024

ರೈಲಿನಲ್ಲಿ ಟಿಕೆಟ್ ಪರಿಶೀಲನೆ ವೇಳೆ ಚಾಕುವಿನಿಂದ ಇರಿದ ಮುಸುಕುಧಾರಿ ಪ್ರಯಾಣಿಕ – ಸಿಬ್ಬಂದಿ ಮೃತ್ಯು

ಚಲಿಸುತ್ತಿದ್ದ ರೈಲಿನಲ್ಲಿ ಮುಸುಕುಧಾರಿ ಪ್ರಯಾಣಿಕನೊಬ್ಬ ಚಾಕುವಿನಿಂದ ನಡೆಸಿದ ದಾಳಿಯಲ್ಲಿ ಓರ್ವ ರೈಲ್ವೆ ಸಿಬ್ಬಂದಿ ಮೃತಪಟ್ಟಿದ್ದು, ಟಿಟಿಇ ಸೇರಿ ಮೂವರು ಗಾಯಗೊಂಡ ಘಟನೆ ನಡೆದಿದೆ.

ಬೋಗಿ ಅಟೆಂಡರ್ ದೇವ‌ಋಷಿ ವರ್ಮಾ (23) ಮೃತಪಟ್ಟವರು. ಆರೋಪಿಯು ಹೃದಯಕ್ಕೇ ಚಾಕು ಇರಿದಿದ್ದರಿಂದ ವರ್ಮಾ ತೀವ್ರ ನಿತ್ರಾಣಗೊಂಡರು. ಗಾಯಾಳುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಪುದುಚೆರಿ- ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್‌ ರೈಲಿನ ಎಸ್‌-8 ಬೋಗಿಯಲ್ಲಿ ಘಟನೆ ನಡೆದಿದೆ. ರೈಲು ಧಾರವಾಡ ದಾಟಿ ಬೆಳಗಾವಿಯತ್ತ ಚಲಿಸುತ್ತಿತ್ತು. ಗುಂಜಿ-ಖಾನಾಪುರ ಮಧ್ಯದಲ್ಲಿ ಟಿಕೆಟ್‌ ಪರಿವೀಕ್ಷಕ (ಟಿಟಿಇ) ಅಶ್ರಫ್‌ ಕಿತ್ತೂರ ಅವರು ಟಿಕೆಟ್‌ ಚೆಕ್‌ ಮಾಡುತ್ತಿದ್ದರು. ಬೋಗಿಯಲ್ಲಿ ಮುಸುಕು ಧರಿಸಿ ಕುಳಿತಿದ್ದ ವ್ಯಕ್ತಿಯಿಂದ ಟಿಕೆಟ್‌ ಕೇಳಿದರು. ಅವರಿಗೆ ಟಿಕೆಟ್‌ ತೋರಿಸಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದಿದೆ. ತನ್ನ ಬಳಿ ಇದ್ದ ಚಾಕು ತೆಗೆದ ಮುಸುಕುಧಾರಿ ಟಿಟಿಇ ಅವರ ಮೇಲೆ ಹಲ್ಲೆ ನಡೆಸಿದ. ಗಾಯಗೊಂಡ ಟಿಟಿಇ ಅವರನ್ನು ರಕ್ಷಿಸಲು ಅಟೆಂಡರ್‌ ದೇವಋಷಿ ಧಾವಿಸಿದ್ದಾರೆ.

ಆರೋಪಿ ಅವರ ಎದೆಗೂ ಚಾಕು ಇರಿದ. ಜಗಳ ಬಿಡಿಸಲು ಬಂದ ಇನ್ನಿಬ್ಬರು ಸಿಬ್ಬಂದಿ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಜಿಲ್ಲಾಸ್ಪತ್ರೆಗೆ ಹಾಗೂ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೇವಋಷಿ ಅವರ ಮರಣೋತ್ತರ ಪರೀಕ್ಷೆ ಮಾಡಿ, ಶವವನ್ನು ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Related Articles

Latest Articles