ಬೆಂಗಳೂರು: ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿ ತಲೆ ಹಾಗೂ ಮೈ ಮೇಲೆ ಗಾಯಗೊಂಡ ಸ್ಥಿತಿಯಲ್ಲಿ ಒಂದು ದಿನದ ಹಸಗೂಸು ಪತ್ತೆಯಾಗಿದ್ದು, ಅದನ್ನು ರಕ್ಷಿಸಿರುವ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
‘ಆರ್‌ಬಿಐ ಬಡಾವಣೆಯಲ್ಲಿರುವ ಎರಡು ಕಟ್ಟಡಗಳ ನಡುವಿನ ಜಾಗದಲ್ಲಿ ಹಸುಗೂಸು ಪತ್ತೆಯಾಗಿದೆ. ಇಲಿ ಹಾಗೂ ಹೆಗ್ಗಣಗಳು ಕಚ್ಚಿದ್ದರಿಂದ ಮಗು ಗಾಯಗೊಂಡಿದೆ. ಆಸ್ಪತ್ರೆಗೆ ಸೇರಿಸಲಾಗಿದೆ. ಹಸುಗೂಸು ಪತ್ತೆ ಸಂಬಂಧ ಪ್ರಕರಣವೂ ದಾಖಲಾಗಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.
‘ಬುಧವಾರ ರಾತ್ರಿ ಮಗು ಅಳುತ್ತಿದ್ದ ಶಬ್ದ ಕೇಳಿಸಿತ್ತು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಮಗು ಪತ್ತೆಯಾಯಿತು. ಆಗ ತಾನೇ ಜನಿಸಿದ್ದ ಮಗುವನ್ನು ಯಾರೋ ಎಸೆದು ಹೋಗಿದ್ದಾರೆ. ಅವರು ಯಾರು ಎಂಬುದು ಗೊತ್ತಾಗಿಲ್ಲ. ಪೊಲೀಸರು ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.’
‘ಹಸುಗೂಸು ಇದ್ದ ಜಾಗದಲ್ಲಿ ಇಲಿಗಳು ಹಾಗೂ ಹೆಗ್ಗಣಗಳು ಓಡಾಡುತ್ತವೆ. ಹಸುಗೂಸಿನ ತಲೆ ಹಾಗೂ ಮೈಗೆಲ್ಲ ಕಚ್ಚಿವೆ. ಮಗುವಿನ ಜೀವಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ’ ಎಂದು ಸ್ಥಳೀಯರು ತಿಳಿಸಿದರು.