ವಿರಾಟ್ ಕೊಹ್ಲಿ ಇತ್ತೀಚೆಗೆ ಅತೀವ ದೈವ ಭಕ್ತರಾಗಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಅನೇಕರು ಚರ್ಚೆ ನಡೆಸುತ್ತಿರುವಾಗಲೇ, ಕೊಹ್ಲಿ 10 ವರ್ಷ ಹಿಂದಿನ ರೋಚಕ ಕಥೆಯೊಂದನ್ನು ಬಹಿರಂಗಪಡಿಸಿದ್ದಾರೆ.
2014-15ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ‘ವಿರಾಟ’ ರೂಪ ಪ್ರದರ್ಶಿಸಿದ್ದ ಕೊಹ್ಲಿ, ಓಂ ನಮಃ ಶಿವಾಯ ಎಂದು ಜಪ ಮಾಡಿಕೊಂಡೇ ನಾಲ್ಕು ಟೆಸ್ಟ್ ಶತಕಗಳನ್ನು ಸಿಡಿಸಿದ್ದರು. ವಿರಾಟ್ ಕೊಹ್ಲಿ ಓಂ ನಮಃ ಶಿವಾಯ ಎಂದುಕೊಂಡು ಶತಕ ಬಾರಿಸಿದ್ದನ್ನು ನೆನಪಿಸಿಕೊಂಡಿದ್ದು ಗೌತಮ್ ಗಂಭೀರ್.
ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಜೊತೆ ಕೊಹ್ಲಿ ನಡೆಸಿರುವ ವಿಶೇಷ ಸಂವಾದದಲ್ಲಿ ಈ ಕುತೂಹಲಕಾರಿ ವಿಷಯ ಬಹಿರಂಗಗೊಂಡಿದೆ. ಬಿಸಿಸಿಐ ತನ್ನ ಅಧಿಕೃತ ವೆಬ್‌ಸೈಟ್ ಬಿಸಿಸಿಐ.ಟಿವಿಯಲ್ಲಿ ಕೊಹ್ಲಿ ಹಾಗೂ ಗಂಭೀರ್ ನಡುವಿನ ಸಂವಾದದ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ಕೊಹ್ಲಿ ಜಪ ಮಾಡಿದ್ದ ವಿಷಯವನ್ನು ಬಹಿರಂಗಪಡಿಸಿರುವುದು ಗಂಭೀರ್. ಸಂವಾದದ ವೇಳೆ ಕೊಹ್ಲಿ, ಗಂಭೀರ್ ಬಳಿ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಗಳಲ್ಲಿನ ರೋಚಕ ಕ್ಷಣಗಳ ಬಗ್ಗೆ ಮಾತನಾಡುವಂತೆ ಕೇಳುತ್ತಾರೆ.
ಆಗ ಗಂಭೀರ್, ‘ನನ್ನ ಬದಲು ಮಾತನಾಡುವ ಬದಲು, ಆಸ್ಟ್ರೇಲಿಯಾದಲ್ಲಿ ನೀವು ಬಂಪರ್ ಬ್ಯಾಟಿಂಗ್ ನಡೆಸಿದ ಸರಣಿ ಬಗ್ಗೆ ಮಾತನಾಡೋಣ. 2014-15ರ ಸರಣಿಯಲ್ಲಿ ನೀವು ರಾಶಿ ರಾಶಿ ರನ್ ಬಾರಿಸಿದಾಗ, ಓಂ ನಮಃ ಶಿವಾಯ ಎಂದು ಜಪ ಮಾಡುತ್ತಿದ್ದೆ ಎಂದು ನನ್ನ ಬಳಿ ಹೇಳಿದ್ದು ನನಗೆ ಇನ್ನೂ ನೆನಪಿದೆ’ ಎಂದಿದ್ದಾರೆ. ಇದಕ್ಕೆ ಕೊಹ್ಲಿ ನಗುತ್ತಲೇ ತಲೆಯಾಡಿಸಿದ್ದಾರೆ.
ಹನುಮಾನ್ ಚಾಲೀಸಾ ಪಠಿಸುತ್ತಾ ಭಾರತ ಟೀಂ ‘ಕಾಪಾಡಿದ್ದ’ ಗಂಭೀರ್!
ಗೌತಮ್ ಗಂಭೀರ್ 2009ರಲ್ಲಿ ನ್ಯೂಜಿಲೆಂಡ್ ವಿರುದ್ಧ ನೇಪಿಯರ್ ಟೆಸ್ಟ್‌ನಲ್ಲಿ ಎರಡೂವರೆ ದಿನ ಬ್ಯಾಟಿಂಗ್ ಮಾಡಿ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದರು. ಆ ಟೆಸ್ಟ್ ಬಗ್ಗೆಯೂ ಸಂವಾದದ ವೇಳೆ ಚರ್ಚೆ ನಡೆದಿದೆ. ಗಂಭೀರ್, ಎರಡೂವರೆ ದಿನವೂ ಹನುಮಾನ್ ಚಾಲೀಸಾ ಪಠಣೆ ಮಾಡುತ್ತಾ, ಬ್ಯಾಟ್ ಮಾಡಿ 137 ರನ್ ಹೊಡೆದಿದ್ದರು ಎನ್ನುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.