Wednesday, November 6, 2024

ಕುಂಬಳೆ: ಪೋಕ್ಸೋ ಪ್ರಕರಣ – ಹೇಳಿಕೆ ಬದಲಾಯಿಸದೇ ಇದ್ದಲ್ಲಿ ಸಂತ್ರಸ್ಥೆ ಹಾಗೂ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆಯ ಒಡ್ಡಿದ ಯುವಕನ ಬಂಧನ

ಕುಂಬಳೆ: ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಹೇಳಿಕೆ ಬದಲಾಯಿಸದ್ದಿದ್ದಲ್ಲಿ ಸಂತ್ರಸ್ತೆ ಹಾಗೂ ಕುಟುಂಬವನ್ನು ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ ಆರೋಪದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಯುವಕನ ವಿರುದ್ಧ ಜಾಮೀನು ರಹಿತ ಕಾಯ್ದೆ ಪ್ರಕಾರ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಬಂಬ್ರಾಣ ಬಯಲಿನ ವರುಣ್ ರಾಜ್ ಶೆಟ್ಟಿ (30) ಬಂಧಿತ ಆರೋಪಿ.

ವರುಣ್ ರಾಜ್ ಶೆಟ್ಟಿಯ ಸಹೋದರನೂ, ಕಾಪಾ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿರುವ ಕಿರಣ್ ರಾಜ್ ಶೆಟ್ಟಿ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 2018ರಲ್ಲಿ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಈ ಪ್ರಕರಣದ ವಿಚಾರಣೆ ಕಾಸರಗೋಡು ನ್ಯಾಯಾಲಯದಲ್ಲಿ ಆರಂಭಗೊಂಡಿರುತ್ತದೆ. ಈ ಮಧ್ಯೆ ಕಿರಣ್ ನ ಸಹೋದರ ವರುಣ್ ರಾಜ್ ಶೆಟ್ಟಿ ತನ್ನ ಸಹೋದರನ ಅನುಕೂಲವಾಗಿ ಹೇಳಿಕೆ ನೀಡದಿದ್ದಲ್ಲಿ ಸಂತ್ರಸ್ತೆ ಹಾಗೂ ಕುಟುಂಬವನ್ನು ಕೊಲೆಗೈಯ್ಯುವುದಾಗಿ ಬೆದರಿಕೆಯೊಡ್ಡಿದ್ದಾನೆ.

ಈ ವಿಷಯವನ್ನು ಸಂತ್ರಸ್ತೆ ನಿನ್ನೆ ನ್ಯಾಯಾಲಯದಲ್ಲಿ ತಿಳಿಸಿದ್ದಳು. ಇದರಂತೆ ನ್ಯಾಯಾಲಯದ ನಿರ್ದೇಶನದ ಪ್ರಕಾರ ವರುಣ್ ರಾಜ್ ಶೆಟ್ಟಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿ ಊರಿನಿಂದ ಪರಾರಿಯಾಗಲು ಸಾಧ್ಯತೆಯಿದೆಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಬಂಧನಕ್ಕೆ ತಯಾರಿ ನಡೆಸಿದ್ದರು.

ಬೆಳಿಗ್ಗೆ 6 ಗಂಟೆ ವೇಳೆ ಪೊಲೀಸರಾದ ವಿನೋದ್ ಕುಮಾರ್ ಹಾಗೂ ಸುಭಾಷ್ ಮಪ್ತಿಯಲ್ಲಿ ಮನೆ ಪರಿಸರದಲ್ಲಿ ಕಾದು ನಿಂತಿದ್ದರು. ಈ ವೇಳೆ ಬಟ್ಟೆಬರೆಗಳನ್ನು ಬ್ಯಾಗ್‌ನಲ್ಲಿ ತುಂಬಿಸಿ ಮಂಗಳೂರಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ವರುಣ್ ರಾಜ್ ಶೆಟ್ಟಿಯನ್ನು ಬಂಧಿಸಲಾಗಿದೆ. ಈತನೂ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಐ ಕೆ. ಶ್ರೀಜೇಶ್ ತನಿಖೆ ನಡೆಸುತ್ತಿದ್ದಾರೆ.

Related Articles

Latest Articles