ನವಭಾರತ ಭಯೋತ್ಪಾದನೆಯನ್ನ ಸಹಿಸುವುದಿಲ್ಲ, ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಲು ಸದಾ ಸಿದ್ಧವಾಗಿ ಇರುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಬುಧವಾರ ನ್ಯೂಸ್18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ ಐದು ವರ್ಷಗಳ ಹಿಂದೆ 2019 ರಲ್ಲಿ ನ್ಯೂಸ್ 18 ರ ರೈಸಿಂಗ್ ಶೃಂಗಸಭೆಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು.
ಆ ದಿನ ನಾವೆಲ್ಲರೂ ಈ ವೇದಿಕೆಯಲ್ಲಿ ಕುಳಿತಿದ್ದೆವು. ತುಂಬಾ ಶಾಂತ ಮನಸ್ಸಿನಿಂದ ನಿಮ್ಮೆಲ್ಲರ ಮಾತನ್ನು ಕೇಳುತ್ತಿದ್ದೆ ಎಂದು ಭಾವಿಸಿರಬಹುದು. ಆದರೆ ಆ ದಿನ ರಾತ್ರಿ ಭಾರತ ಸೇನೆ ಬಾಲಾಕೋಟ್‌ನಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಲು ಸಿದ್ಧತೆ ನಡೆಸುತ್ತಿದ್ದ ಬಗ್ಗೆ ತಾವೂ ಯೋಚಿಸುತ್ತಿದ್ದಾಗಿ ತಿಳಿಸಿದರು.
ಎಲ್ಲರೂ ರೈಸಿಂಗ್ ಇಂಡಿಯಾವನ್ನು ನೋಡುತ್ತಿದ್ದಾರೆ. ನವ ಭಾರತ ಭಯೋತ್ಪಾದನೆಯನ್ನು ಸಹಿಸುವುದಿಲ್ಲ. ಭಯೋತ್ಪಾದನೆ ಬೆದರಿಕೆ ಹಾಕುವವರಿಗೂ ದೇಶ ತಕ್ಕ ಪಾಠ ಕಲಿಸಲಿದೆ. ಭಯೋತ್ಪಾದನೆಯಿಂದ ನಮ್ಮನ್ನು ನೋಯಿಸುವವರಿಗೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಜಗತ್ತು ನೋಡುತ್ತದೆ. ಸುಭದ್ರ ಭಾರತ ಮಾತ್ರ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ಆಧಾರವಾಗಬಲ್ಲದು. ಇದು ಭಾರತದ ಅಸ್ಮಿತೆ ಮತ್ತು ಇದು ರೈಸಿಂಗ್ ಇಂಡಿಯಾ ಎಂದು ತಿಳಿಸಿದರು.
ಬಾಲ್ಕೋಟ್ ಸರ್ಜಿಕಲ್ ಸ್ಟ್ರೈಕ್ ನೆನೆದ ಮೋದಿ
ಫೆಬ್ರವರಿ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಅರೆಸೇನಾ ಪಡೆಯ ಬೆಂಗಾವಲು ಪಡೆಯ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಕೃತ್ಯವೆಸಗಿದ ಉಗ್ರರಿಗೆ ಪಾಠ ಕಲಿಸಲು ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿ ಅಡಗಿದ್ದ ಉಗ್ರರ ತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದರಲ್ಲಿ ಭಾರೀ ಸಂಖ್ಯೆಯ ಉಗ್ರರು ಹತರಾಗಿದ್ದರು.