Thursday, November 14, 2024

ನೇಹಾ ಹಿರೇಮಠ್‌ ಹತ್ಯೆ: ಮಗನಿಗೆ ಯಾವ ಶಿಕ್ಷೆ ಕೊಟ್ಟರೂ ಸ್ವಾಗತ – ಹಂತಕನ ತಂದೆ ಕಣ್ಣೀರು

ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್​​ನಲ್ಲಿ ಕಾಂಗ್ರೆಸ್‌ ಬೆಂಬಲಿತ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾಳನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿ ಫಯಾಜ್​ನನ್ನು (23) ಬಂಧಿಸಿದ್ದು, ಇದೀಗ ನೇಹಾ ಕೊಲೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಆರೋಪಿ ಫಯಾಜ್​ನನ್ನು ಗಲ್ಲೇರಿಸಬೇಕೆಂದು, ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಬೇಕೆನ್ನುವ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು ಇದರ ಮಧ್ಯೆ ನೇಹಾ ಹಂತಕ ಫಯಾಜ್​ ತಂದೆ ಬಾಬಾ ಸಾಹೇಬ್ ಪ್ರತಿಕ್ರಿಯಿಸಿದ್ದು, ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ.

ಹೆಣ್ಣು ಮಕ್ಕಳು ಎಂದರೆ ಪೂಜಿಸುತ್ತೇವೆ. ಹೆಣ್ಣು ಮಕ್ಕಳು ಎಂದರೆ ದೇವರೆಂದು ಭಾವಿಸುವ ದೇಶ ನಮ್ಮದು, ಅನ್ಯಾಯ ಆದಲ್ಲಿ ಪ್ರತಿಭಟನೆ ಮಾಡುತ್ತಾರೆ. ಅವರ ಹೋರಾಟಕ್ಕೆ ಜಯವಾಗಲಿ. ಕರ್ನಾಟಕ ಜನತೆಯಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಈ ಘಟನೆಯಿಂದ ಮುನವಳ್ಳಿ ಊರಿಗೆ ಕಪ್ಪು ಚುಕ್ಕೆ ಬಂದಿದೆ. ರಾಜ್ಯದ ಜನತೆ ಹಾಗೂ ಮುನವಳ್ಳಿ ಯುವಕರು ಶಾಂತಿ ಕಾಪಾಡುವಂತೆ ಕಣ್ಣೀರಾಕುತ್ತಲೇ ಮನವಿ ಮಾಡಿದ ಬಾಬಾ ಸಾಹೇಬ್, ಕಾನೂನು ಯಾವ ಶಿಕ್ಷೆ ಕೊಟ್ಟರೂ ಅದನ್ನು ನಾನು ಸ್ವಾಗತಿಸುತ್ತೇನೆ. ದಯವಿಟ್ಟು ನೇಹಾ ಕುಟುಂಬದವರು, ರಾಜ್ಯದ ಜನ ಹಾಗೂ ಮುನವಳ್ಳಿ ಜನತೆ ನನ್ನನ್ನು ಕ್ಷಮಿಸಬೇಕು ಎಂದು ಕೈ ಮುಗಿದು ಅಂಗಲಾಚಿದ್ದಾರೆ.

ಎರಡು ವರ್ಷದಿಂದ ಮಗ ನಮ್ಮ ಬಳಿ ಇರಲಿಲ್ಲ. ಹೆಚ್ಚಿನ ಶಿಕ್ಷಣಕ್ಕಾಗಿ ನಗರ ಪ್ರದೇಶಕ್ಕೆ ಹೋಗಿದ್ದನು. ತಪ್ಪು ಮಾಡಿದ್ದಲ್ಲಿ ಖಂಡಿಯ ಪ್ರತಿಭಟನೆ ಮಾಡಬೇಕು. ನ್ಯಾಯಕ್ಕಾಗಿ ಪ್ರತಿಭಟನೆ ನಡೆಸೋದು ತಪ್ಪಲ್ಲ. ಯಾವ ಹೆಣ್ಣು ಮಕ್ಕಳ ಮೇಲೆ ಯಾರೂ ಕಣ್ಣು ಹಾಕಬಾರದು. ಅವಳು ನನ್ನ ಮಗಳಿದ್ದ ಹಾಗೆ. ಅವರ ಮಗಳಿಗೆ ಆದ ಕೃತ್ಯ ನಮ್ಮ ಮಗಳ ಮೇಲೆಯೂ ಆಗಬಹುದು. ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ ಎಂದರು.

ಮೂಲ ವರದಿ: ಟಿವಿ೮ ಕನ್ನಡ

Related Articles

Latest Articles