Sunday, April 20, 2025

ಕಾಸರಗೋಡು: ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ – ನೇಣಿಗೆ ಶರಣಾದ ತಂದೆ

ಕಾಸರಗೋಡು: ಮಗಳ ಮದುವೆಯ ಸಿದ್ಧತೆ ನಡೆಯುತ್ತಿದ್ದಂತೆ ನಾಪತ್ತೆಯಾಗಿದ್ದ ತಂದೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮುಳ್ಳೇರಿಯ ಬಳಿಯ ಕಾರ್ಲೆ ನಿವಾಸಿ ರಾಜ ರಾವ್‌ (೫೧) ಮೃತಪಟ್ಟ ವ್ಯಕ್ತಿ.

ಇವರ ಮಗಳ ಮದುವೆ ಮೇ.2ರಂದು ಕರ್ಮಂತೋಡಿಯ ಆಡಿಟೋರಿಯಂನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಮದುವೆಯ ಅಂಗವಾಗಿ ಮದುವೆಯ ಹಿಂದಿನ ದಿನ ಮದರಂಗಿ ಶಾಸ್ತ್ರ ಮನೆಯಲ್ಲಿ ಏರ್ಪಡಿಸಲಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದಂತೆ ರಾಜ ಸ್ಕೂಟರ್‌ನಲ್ಲಿ ಮನೆಯಿಂದ ತೆರಳಿ ನಾಪತ್ತೆಯಾಗಿದ್ದರು. ಫೋನ್ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಇದರಿಂದ ಹುಡುಕಾಟ ನಡೆಯುತ್ತಿದ್ದಾಗ ಅವರ ಸ್ಕೂಟರ್ ದೇಲಂಪಾಡಿ ಬಳಿ ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ವ್ಯಾಪಕ ಶೋಧ ನಡೆಸುತ್ತಿದ್ದಂತೆ ದೇಲಂಪಾಡಿ ಸಮೀಪ ಮರದಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ರಾಜ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ದೀಪ್ತಿ, ದೀಕ್ಷ, ಓರ್ವ ಸಹೋದರಿ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

Related Articles

Latest Articles