Monday, December 9, 2024

ಕೇರಳದ ನಿರ್ದೇಶಕನ ಮನೆಯಿಂದ ಕೋಟಿಗಟ್ಟಲೆ ಚಿನ್ನ ಕದ್ದವ ಉಡುಪಿಯಲ್ಲಿ ಪೊಲೀಸರ ಬಲೆಗೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯ ಗಂಡ ಮೋಸ್ಟ್‌ ವಾಂಟೆಡ್‌ ಕಳ್ಳ ..! 16 ಗಂಟೆಯಲ್ಲಿ ಸಿಕ್ಕಿಬಿದ್ದ ಖದೀಮ

ಉಡುಪಿ: ಕೇರಳದ ಚಿತ್ರ ನಿರ್ದೇಶಕ ಜೋಶಿ ಅವರ ಮನೆಯಿಂದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪಿಯನ್ನು ಉಡುಪಿಯ ಕುಂದಾಪುರದಲ್ಲಿ ಪೊಲೀಸರಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಮುಹಮ್ಮದ್ ಇರ್ಫಾನ್ 6 ರಾಜ್ಯಗಳಲ್ಲಿ 19 ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಬಿಹಾರಕ್ಕೆ ಚಿನ್ನ ಸಾಗಿಸುತ್ತಿದ್ದ ಈ ಅಂತರ್ ರಾಜ್ಯ ಕಳವು ಆರೋಪಿಯೋರ್ವನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಬಿಹಾರ ರಾಜ್ಯದ ಸೀತಾಮರಿ ಜಿಲ್ಲೆಯ ನಿವಾಸಿ ಮುಹಮ್ಮದ್ ಇರ್ಫಾನ್ (35) ಬಂಧಿತ ಆರೋಪಿ. ಈತನ ಮೇಲೆ 6 ರಾಜ್ಯಗಳಲ್ಲಿ 19 ಕಳ್ಳತನ ಪ್ರಕರಣಗಳು ದಾಖಲಾಗಿದೆ.

ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳ ಕಪಾಟನ್ನು ಒಡೆದು 10 ವಜ್ರದ ಉಂಗುರ, 12 ವಜ್ರದ ಕಿವಿಯೋಲೆ, 2 ಚಿನ್ನದ ಉಂಗುರ, 10 ಚಿನ್ನದ ನೆಕ್ಲೆಸ್, 10 ಚಿನ್ನದ ಬಳೆ, 10 ಕೈಗಡಿಯಾರ ಸಹಿತ 1 ಕೋಟಿ ರೂ. ಮೌಲ್ಯದ 1.2 ಕೆಜಿ ಆಭರಣಗಳನ್ನು ಕಳವುಗೈದು ಪರಾರಿಯಾಗಿದ್ದ.

ಜೋಶಿ ಅವರ ಮನೆಯಲ್ಲಿ ದರೋಡೆ ನಡೆಸಿದ ಬಳಿಕ ಕಾರಿನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂಬ ಬೋರ್ಡ್ ಹಾಕಿಕೊಂಡು ಪರಾರಿಯಾಗಿದ್ದ. ಮುಹಮ್ಮದ್ ಇರ್ಫಾನ್ ಬಿಹಾರದ ಸೀತಾ ಮುರ್ಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯ ಪತಿ ಎನ್ನಲಾಗಿದೆ. ಆದರೆ 16 ಗಂಟೆಯೊಳಗೆ ಕರ್ನಾಟಕದ ಉಡುಪಿಯಿಂದ ಸಿಕ್ಕಿಬಿದ್ದಿದ್ದಾನೆ.

ಈ ನಡುವೆ ಅಪಾರ ಪ್ರಮಾಣದ ಚಿನ್ನಾಭರಣವನ್ನು ಕೇರಳದಿಂದ ಕರ್ನಾಟಕವಾಗಿ ಬಿಹಾರಕ್ಕೆ ಅಕ್ರಮವಾಗಿ ಸಾಗಟ ಮಾಡುತ್ತಿರುವ ಬಗ್ಗೆ ಕೋಟ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಕಳೆದ ರಾತ್ರಿ ಕೋಟ ಪೊಲೀಸರು ಕಾರನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಆರೋಪಿಯ ವಿಚಾರಣೆ ನಡೆಸಿದ್ದು, ಕೇರಳ ಪೊಲೀಸರು ಜಿಲ್ಲೆಗೆ ಆಗಮಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯನ್ನು ಆಧರಿಸಿ ಕೋಟ ಪೊಲೀಸರು ಮೂರ್ಕೈ ಸಮೀಪ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಲಯಾಳಂ ಚಲನಚಿತ್ರ ನಿರ್ಮಾಪಕ ಜೋಶಿಯವರ ಕೊಚ್ಚಿ ಪನಂಪಲ್ಲಿಯ ಮನೆಯಿಂದ ಎ.20ರಂದು ಮುಂಜಾನೆ ಕಳ್ಳತನ ನಡೆದಿತ್ತು.

ಆರೋಪಿಯನ್ನು ಬಂಧಿಸುವಲ್ಲಿ ಕರ್ನಾಟಕ ನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರ ಸಹಾಯವು ನಿರ್ಣಾಯಕವಾಗಿದೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಕೊಚ್ಚಿಗೆ ಕರೆತಂದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ. ಆತನಿಗೆ ಮೂರು ದಿನಗಳ ಕಾಲ ರಿಮಾಂಡ್ ನೀಡಲಾಗಿದೆ.

Related Articles

Latest Articles