ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ಸ್ವದೇಶಿ ನಿರ್ಮಿತ ತಂತ್ರಜ್ಞಾನಕ್ಕೆ ಒತ್ತನ್ನು ನೀಡಲಾಗುತ್ತಿದೆ. ಅದರ ಪ್ರತಿಫಲವಾಗಿ ಅತ್ಯಾಧುನಿಕ ಮತ್ತು ಮಾನವ ರಹಿತ ಬಾಂಬರ್ ಡ್ರೋನ್ ವಿಮಾನ ಇಂದು ಅನಾವರಣಗೊಳಿಸಲಾಗಿದೆ. ದೇಶದ ಮೊದಲು ಸ್ವದೇಶಿ ನಿರ್ಮಿತ ಬಾಂಬರ್ ಡ್ರೋನ್ ಅನಾವರಣಗೊಂಡಿದೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಮಿಲಿಟರಿ ಬಾಂಬರ್ ಡ್ರೋನ್ ವಿಮಾನವನ್ನ ಲೋಕಾರ್ಪಣೆ ಮಾಡಲಾಯಿತು.
ಈ ವಿಮಾನ ನಾಲ್ಕು ಇಂಜಿನ್ ಹೊಂದಿದ್ದು ಏಕಕಾಲಕ್ಕೆ 2 ಸಾವಿರ ಕಿ.ಮೀ ದೂರ ಹಾಗೂ 20 ಗಂಟೆಗಳ ಕಾಲ ನಿರಂತರ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯ ಸಿಇಓ ಸುಹಾಸ್ ತೇಜಸ್ಕಂದ ತಿಳಿಸಿದರು.
ಇತ್ತಿಚೆಗೆ ಯುದ್ದದ ಆಯಾಮಗಳು ಬದಲಾಗಿದೆ. ಇತ್ತಿಚೆಗೆ ನಡೆದ ಉಕ್ರೇನ್ ಹಾಗೂ ರಷ್ಯಾ ಯುದ್ದದಲ್ಲಿ ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಮಾನವರಹಿತ ಡ್ರೋನ್ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ನಮ್ಮ ಸಂಸ್ಥೆಯಿಂದ ಭಾರತದ ಮೊಟ್ಟ ಮೊದಲ ಮಾನವರಹಿತ ಡ್ರೋನ್ ನಿರ್ಮಾಣ ಮಾಡಲಾಗಿದೆ.
ಈ ವಿಮಾನ ಶತ್ರು ರಾಷ್ಟ್ರದ ಗಡಿಯವರೆಗೂ ಹೋಗಿ 100 ಕ್ಕೂ ಹೆಚ್ಚು ಸಣ್ಣ ಪ್ರಮಾಣ ಡ್ರೋನ್ ಗಳನ್ನು ಬಿಟ್ಟು ಶತ್ರು ರಾಷ್ಟ್ರಗಳ ನೆಲೆಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಡ್ರೋನ್ ವಿಮಾನ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ಕಂಪನಿಯ ಸಹ ಸಂಸ್ಥಾಪಕ ಪ್ರಜ್ವಲ್ ತಿಳಿಸಿದರು.
ಲೋಕಾರ್ಪಣೆಯಾಗಿರುವ ದೇಶದ ಮೊದಲ ಸ್ವದೇಶಿ ನಿರ್ಮಿತ ಬಾಂಬರ್ ಡ್ರೋನ್ ಮುಂದಿನ ದಿನಗಳಲ್ಲಿ ವಾಯು ಸೇನೆಗೆ ಸೇರ್ಪಡೆಗೊಂಡು ಯಶಸ್ವಿಯಾಗಲಿ ಎಂದು ಆಶಿಸೋಣ.