Friday, June 27, 2025

ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ ಬರೋಬ್ಬರಿ 13,500 ಕೋಟಿ ರೂಪಾಯಿ ವಂಚನೆ; ಬೆಲ್ಜಿಯಂನಲ್ಲಿ ವಜ್ರದ ವ್ಯಾಪಾರಿಯ ಬಂಧನ

ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ ಬರೋಬ್ಬರಿ 13,500 ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದ ವಜ್ರದ ವ್ಯಾಪಾರಿಯನ್ನು ಬಂಧಿಸಿದ್ದಾರೆ. ವಜ್ರದ ವ್ಯಾಪಾರಿ ಮೆಹುಲ್​ ಚೋಕ್ಸಿಯನ್ನು ( Mehul Choksi) ಬೆಲ್ಜಿಯಂನಲ್ಲಿ ಅರೆಸ್ಟ್ ಮಾಡಲಾಗಿದೆ. ಸೆಂಟ್ರಲ್ ಬ್ಯೂರೋ ಆಫ್​ ಇನ್ವೆಸ್ಟಿಗೇಶನ್ (ಸಿಬಿಐ), ಜಾರಿ ನಿರ್ದೇಶನಾಲಯದ ಸೇರಿ ಭಾರತದ ತನಿಖೆ ಸಂಸ್ಥೆಗಳ ಕೋರಿಕೆ ಮೇರೆಗೆ ಮೆಹುಲ್​ ಚೋಕ್ಸಿಯನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿದೆ.

ಮೆಹುಲ್​ ಚೋಕ್ಸಿ ಪಂಜಾಬ್ ನ್ಯಾಷನಲ್​ ಬ್ಯಾಂಕ್​ಗೆ​ 13,500 ಕೋಟಿ ರೂಪಾಯಿಗಳನ್ನು ವಂಚನೆ ಮಾಡಿರುವ ಆರೋಪ ಇದೆ. ಆದರೆ ವೈದ್ಯಕೀಯ ಚಿಕಿತ್ಸೆಗೆಂದು ಯುರೋಪ್​ಗೆ ಹೋಗಿದ್ದ ಉದ್ಯಮಿ ಮತ್ತೆ ಭಾರತದತ್ತ ಮುಖ ಮಾಡಿರಲಿಲ್ಲ. ಇವರ ಮೇಲೆ ಮುಂಬೈ ಕೋರ್ಟ್​ ಜಾಮೀನು ರಹಿತ ವಾಂರಟ್ ಹೊರಡಿಸಿತ್ತು. ಬ್ಯಾಂಕ್ ವಂಚನೆಯಲ್ಲಿ ಚೋಕ್ಸಿ ಜೊತೆಗೆ ಅವರ ಸೋದರಳಿ ಕೂಡ ಭಾಗಿಯಾಗಿರುವ ಆರೋಪಗಳು ಇವೆ.

ಭಾರತದಿಂದ ಬಂದು ಇಲ್ಲಿ ತಲೆಮರೆಸಿಕೊಂಡಿರುವುದನ್ನು ಬೆಲ್ಜಿಯಂ ಅಧಿಕಾರಿಗಳು ಕಳೆದ ತಿಂಗಳು ಕನ್ಫರ್ಮ್​ ಮಾಡಿದ್ದರು. ಪತ್ನಿ ಪ್ರೀತಿ ಚೋಕ್ಸಿ ಜೊತೆ ರೆಸಿಡೆನ್ಸಿ ಕಾರ್ಡ್​ ಪಡೆದುಕೊಂಡು ಆಂಟೆರ್ಪ್ ನಗರದಲ್ಲಿ ವಾಸಿಸುತ್ತಿರುವುದು ಗೊತ್ತಾಗಿತ್ತು. ಚೋಕ್ಸಿ ಮೇಲಿನ ಪ್ರಕರಣವನ್ನು ಸರ್ಕಾರ ಸೂಕ್ಷ್ಮವಾಗಿ ಪರಿಗಣಿಸುತ್ತಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಬೆಲ್ಜಿಯಂನ ಫೆಡರಲ್ ಪಬ್ಲಿಕ್ ಸರ್ವೀಸ್​ನ ವಿದೇಶಾಂಗ ವ್ಯವಹಾರಗಳ ಸಿಬ್ಬಂದಿ ಡೇವಿಡ್ ಜೋರ್ಡೆನ್ಸ್ ಅವರು ತಿಳಿಸಿದ್ದಾರೆ.

ಬೆಲ್ಜಿಯಂನಲ್ಲಿ ವಾಸಿಸಲು ಹಕ್ಕು ಪಡೆಯುವ ವೇಳೆ ಮೆಹುಲ್ ಚೋಕ್ಸಿ ತಪ್ಪಾದ ದಾಖಲೆಗಳನ್ನು ನೀಡಿದ್ದಾರೆ. ಅರ್ಜಿಯಲ್ಲಿ ತನ್ನ ರಾಷ್ಟ್ರೀಯತೆಯನ್ನು ತಪ್ಪಾಗಿ ಹೇಳಿ ಇಷ್ಟು ದಿನ ತಪ್ಪಿಸಿಕೊಂಡಿದ್ದರು. ಭಾರತ ಹಾಗೂ ಆಂಟಿಗುವಾದಲ್ಲಿ ಇರುವ ಬಗ್ಗೆ ಪೌರತ್ವ ವಿವರಗಳನ್ನು ಬಹಿರಂಗ ಪಡಿಸಿರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.

ಭಾರತದ ಪ್ರತಿಷ್ಠಿತ ಬ್ಯಾಂಕ್​ಗೆ 13,000 ಕೋಟಿ ರೂಪಾಯಿಗಳನ್ನು ವಂಚನೆ ಮಾಡಿರುವ ಮೆಹುಲ್​ ಚೋಕ್ಸಿಯನ್ನು ಸದ್ಯ ಬೆಲ್ಜಿಯಂನಲ್ಲಿ ಅರೆಸ್ಟ್ ಮಾಡಲಾಗಿದೆ. ಬಂಧನ ಪ್ರಕ್ರಿಯೆಗಳು ಬಳಿಕ ಸದ್ಯದಲ್ಲೇ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಇನ್ನಿತರ ಕಾನೂನು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

Related Articles

Latest Articles