Wednesday, February 19, 2025

ಕಾಸರಗೋಡು: ಪೈಂಟಿಂಗ್ ಕೆಲಸದಲ್ಲಿ ನಿರತನಾಗಿದ್ದ ಯುವಕನಿಗೆ ಚೂರಿ ಇರಿತ – ಓರ್ವನ ಬಂಧನ

ಕಾಸರಗೋಡು: ಹೊಸದಾಗಿ ಆರಂಭಿಸಲಾಗುವ ಅಂಗಡಿಯ ಪೈಂಟಿಂಗ್ ಕೆಲಸದಲ್ಲಿ ನಿರತನಾಗಿದ್ದ ಯುವಕನಿಗೆ ಚೂರಿ ಇರಿದು ಗಾಯಗೊಳಿಸಿದ ಘಟನೆ ಕೂಡ್ಲು ಮೀಪುಗುರಿಯಲ್ಲಿ ಜ. 23ರ ಮುಂಜಾನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಪೊಲೀಸ್‌ ಠಾಣೆಯ ಮುನ್ನಾ ಅಲಿಯಾಸ್ ಅಕ್ಷಯ್ (31) ಬಂಧಿತ ಆರೋಪಿ. ಕೂಡ್ಲು ಎರಿಯಾಲ್ ನಿವಾಸಿ ಬಾಸಿತ್ (25) ಚೂರಿ ಇರಿತಕ್ಕೊಳಗಾದವರು.‌

ಈ ಘಟನೆ ವೇಳೆ ಪ್ರಸ್ತುತ ಅಂಗಡಿಯಲ್ಲಿದ್ದ ಕೂಡ್ಲು ಎರಿಯಾಲ್ ಬ್ಲಾರ್ಕೋಡ್ ಹೌಸ್‌ನ ಮೊಹಮ್ಮದ್ ಅಸೀಫ್ ಸಹೀರ್ (22) ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ನಾನು ಮತ್ತು ನನ್ನ ಸ್ನೇಹಿತ ಬಾಸಿತ್ ಸೇರಿ ಮೀಪುಗುರಿಯಲ್ಲಿ ಹೊಸ ಅಂಗಡಿಯೊಂದನ್ನು ಆರಂಭಿಸಲು ತೀರ್ಮಾನಿಸಿದ್ದು, ಅದರಂತೆ ಆ ಅಂಗಡಿಯ ಪೈಂಟಿಂಗ್ ಕೆಲಸ ನಿನ್ನೆ ರಾತ್ರಿಯಿಂದ ನಡೆಸಲಾಗುತ್ತಿತ್ತು. ಮುಂಜಾನೆ ಯುವಕನೋರ್ವ ಅಲ್ಲಿಗೆ ಬಂದು ಅಂಗಡಿ ಆರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಚಾಕುವಿನಿಂದ ನನ್ನ ಸ್ನೇಹಿತ ಬಾಸಿತ್‌ನಿಗೆ ಇರಿಯಲು ಮುಂದಾಗಿದ್ದಾನೆ. ಈ ವೇಳೆ ಅದನ್ನು ನಾನು ತಡೆದಾಗ ಅದು ಬಾಸಿತ್‌ನ ಎಡ ಕೈಗೆ ತಗಲಿ ಗಂಭೀರ ಗಾಯ ಉಂಟಾಯಿತೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹಮ್ಮದ್ ಅಸೀಫ್ ಸಹೀರ್ ಆರೋಪಿಸಿದ್ದಾರೆ‌.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 126(2), 118(2) ಮತ್ತು 110 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Related Articles

Latest Articles