ಉಪ್ಪಳ: ಸುಳಿದ ಅಡಿಕೆಯನ್ನು ಕಳವುಗೈದು ಸಾಗಿಸುತ್ತಿದ್ದ ವೇಳೆಯೇ ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ವರದಿಯಾಗಿದೆ. ಬಾಯಾರು ನಿವಾಸಿಗಳಾದ ಮೊಹಮ್ಮದ್ ಸಾಲಿ (18), ಮನಾಫ್ (20) ಬಂಧಿತ ಆರೋಪಿಗಳು.
ಆ. 23ರ ಮುಂಜಾನೆ 3 ಗಂಟೆ ವೇಳೆ ಈ ಇಬ್ಬರು ಆರೋಪಿಗಳು ಬಾಯಾರು ನಿವಾಸಿಯೂ ಅಡಿಕೆ ವ್ಯಾಪಾರಿಯಾದ ಅಬ್ದುಲ್ ಖಾದರ್ ಎಂಬವರ ಮನೆಯಿಂದ ಅಡಿಕೆ ಕಳವು ನಡೆಸಿದ್ದರು. ಮನೆಯ ಸಿಟೌಟ್‌ನಲ್ಲಿರಿಸಿದ್ದ ಒಂದು ಕ್ವಿಂಟಾಲ್‌ಗಿಂತ ಹೆಚ್ಚು ಪ್ರಮಾಣದ ಅಡಿಕೆಯನ್ನು ಇವರು ಕಳವುಗೈದು ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಸಮೀಪದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕರ ಗಮನಕ್ಕೆ ಬಂದಿದೆ.
ಸಂಶಯಗೊಂಡ ಅವರು ಸ್ಕೂಟರ್ ತಡೆದು ನಿಲ್ಲಿಸಿದ್ದಾರೆ. ವಿಚಾರಿಸಿದಾಗ ಅಬ್ದುಲ್ ಖಾದರ್‌ರ ಮನೆಯಿಂದ ಕಳವುಗೈದ ಅಡಿಕೆ ಇದಾಗಿದೆಯೆಂದು ತಿಳಿದುಬಂದಿದೆ. ಈ ಬಗ್ಗೆ ಮಾಹಾತಿ ಲಭಿಸಿದ ಅಬ್ದುಲ್ ಖಾದರ್ ಸ್ಥಳಕ್ಕೆ ತಲುಪಿ ತನ್ನ ಮನೆಯಿಂದ ಕಳವಿಗೀಡಾದ ಅಡಿಕೆ ಇದಾಗಿದೆಯೆಂದು ಖಚಿತಪಡಿಸಿದ್ದಾರೆ.
ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಬ್ದುಲ್ ಖಾದರ್ ನೀಡಿದ ದೂರಿನ ಮೇರೆಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.