Friday, July 19, 2024

ಮಂಗಳೂರು: “ಕೃತ್ಯಕ್ಕೆ ಪ್ರಚೋದನಕಾರಿ ಘೋಷಣೆ ಕಾರಣ: ಚೂರಿ ಇರಿದವ ರೌಡಿ ಶೀಟರ್‌” – ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್

ಮಂಗಳೂರು: ಬೋಳಿಯಾರಿನಲ್ಲಿ ಜೂ.೯ ರ ರಾತ್ರಿ ವಿಜಯೋತ್ಸವ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಅಂಶಗಳು ಬಯಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಸುದ್ದಿಗೋಷ್ಠಿ ಕರೆದು ಸವಿವರವಾಗಿ ಮಾಹಿತಿ ನೀಡಿದ್ದಾರೆ. ಈ ಘಟನೆಗೆ ಪ್ರಚೋದನಾಕಾರಿ ಘೋಷಣೆ ಕಾರಣವಾಗಿದೆ. ರೌಡಿಶೀಟರ್ ಪಾಕೆಟ್ ಚೂರಿ ಇಟ್ಟುಕೊಂಡಿದ್ದ. ಆತ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದಾನೆ. ಹಾಗಾಗಿ ಇತ್ತಂಡಗಳ ವಿರುದ್ಧ ಪ್ರರಕಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಜಯೋತ್ಸವ ಮೆರವಣಿಗೆಯಲ್ಲಿ 30-40 ಮಂದಿ ಇದ್ದರು. ಮಾರ್ಗಮಧ್ಯೆ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆ. ಅದಾದ ಮೇಲೆ ಒಂದು ಬೈಕ್‌ನಲ್ಲಿ ಮೂವರು ಯುವಕರು ವಾಪಸ್ ತೆರಳಿ ಘೋಷಣೆ ಕೂಗಿದ್ದಾರೆ. ಆಗ ಅಲ್ಲಿದ್ದ 20 ಮಂದಿ ಸೇರಿ. ಕೆಲವರು ಹಲ್ಲೆ ನಡೆಸಿದ್ದಾರೆ. ಅವರಲ್ಲಿ ಒಬ್ಬಿಬ್ಬರು ಬಾರ್ ಬಳಿ ಚೂರಿಯಿಂದ ಇರಿದಿದ್ದು ಇದರಿಂದ ಒಬ್ಬನ ಹೊಟ್ಟೆಗೆ. ಇನ್ನೊಬ್ಬನ ಬೆನ್ನಿಗೆ ಗಾಯವಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಯುಕ್ತರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಭಾರತ್ ಮಾತಾ ಕಿ ಜೈ’ ಘೋಷಣೆ ಹಾಕಿರುವುದಕ್ಕೆ ಚೂರಿ ಇರಿತ ನಡೆದಿಲ್ಲ. ಬದಲಾಗಿ ಮೆರವಣಿಗೆಯಲ್ಲಿ ಆಟೋರಿಕ್ಷಾ ನಿಲ್ದಾಣದ ಬಳಿ ಪಾಕಿಸ್ತಾನದೊಂದಿಗೆ ಸಂಬಂಧ ಕಲ್ಪಿಸಿ ಘೋಷಣೆಗಳನ್ನು ಕೂಗಿದ್ದಾರೆ. ‘ನೀವು ಪಾಕಿಸ್ತಾನದ ಪರ ಇದ್ದೀರಿ, ಮೋದಿ ವಿರೋಧಿಗಳು..’ ಎಂಬ ಅರ್ಥದ ಆಕ್ಷೇಪಾರ್ಹ ಘೋಷಣೆ ಕೂಗಿದ್ದರು. ಇದು ಸಾಮಾಜಿಕ ಜಾಲತಾಣದ ಮೂಲಕ ಮುಸ್ಲಿಂ ಸಮುದಾಯದವರನ್ನು ತಲುಪಿ ಇದರಿಂದ ಪ್ರಚೋದನೆಗೊಂಡ ಕೆಲವರು ಚೂರಿಯಿಂದ ಇರಿದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದರು.

6 ಮಂದಿಯ ಬಂಧನ
ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ಘೋಷಣೆ ಕೂಗಿದವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಘೋಷಣೆ ಕೂಗಿದವರ ಆರೋಪಿಗಳ ಪೈಕಿ ಓರ್ವ ಚೂರಿ ಇರಿತಕ್ಕೊಳಗಾದವನು. ಚೂರಿ ಇರಿದ ಆರೋಪಿಗಳ ಪೈಕಿ ಓರ್ವ ರೌಡಿಶೀಟರ್. ಆತ ಮಸೀದಿ ಬಳಿಯಲ್ಲಿಯೇ ಇದ್ದ. ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. . ರೌಡಿಶೀಟರ್ ತಲೆಮರೆಸಿಕೊಂಡಿದ್ದಾನೆ ಎಂದು ಆಯುಕ್ತರು ತಿಳಿಸಿದ್ದಾರೆ.

3 ತಂಡಗಳ ರಚನೆ
ಹಲ್ಲೆ ನಡೆಸಿದವರಲ್ಲಿ 6 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ರೌಡಿಶೀಟರ್ ಪಾಕೆಟ್ ಚೂರಿಯನ್ನು ಇಟ್ಟುಕೊಂಡಿದ್ದನೆಂದು ಗೊತ್ತಾಗಿದೆ. ಚೂರಿಯಿಂದ ಹಲ್ಲೆ ನಡೆಸಿದಾತ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿ ಇನ್ನಷ್ಟು ಮಂದಿಯ ಬಂಧನಕ್ಕೆ ಬಲೆ ಬೀಸಲಾಗಿದೆ. ಇದಕ್ಕಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಇನ್ನೊಂದೆಡೆ ಪ್ರಚೋದನಕಾರಿ ಘೋಷಣೆ ಕೂಗಿದ ಮೂವರ ಮೇಲೆ ಪ್ರಕರಣ. ದಾಖಲಿಸಲಾಗಿದೆ ಎಂದು ಅನುಪಮ್ ಅಗರ್‌ವಾಲ್ ತಿಳಿಸಿದರು.

ದಾಖಲೆ ಪರಿಶೀಲನೆ
ಮೆರವಣಿಗೆ ವೇಳೆ ಇಬ್ಬರು ಪೊಲೀಸ್ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಶಾಂತಿಯುತ ಮೆರವಣಿಗೆಗೆ ಗರಿಷ್ಠ ಪ್ರಯತ್ನ ನಡೆಸಿದ್ದಾರೆ. ಮೆರವಣಿಗೆ ಮುಗಿದ ಅನಂತರ ಘಟನೆ ನಡೆದಿದೆ. ಅನುಮತಿ ವೇಳೆ ನಿಗದಿಗೊಳಿಸಿದ ಅವಧಿಯನ್ನು ಮೀರಿ ಮೆರವಣಿಗೆ ನಡೆಸಲಾಗಿದೆಯೇ ಎಂಬುದನ್ನು ಕೂಡ ಪರಿಶೀಲನೆ ನಡೆಸಲಾಗುವುದು. ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವ ಬಗ್ಗೆಯೂ ಸಿಸಿ ಕೆಮರಾ ದಾಖಲೆಗಳನ್ನು ಸಂಗ್ರಹಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಎಲ್ಲ ಠಾಣೆಗಳಲ್ಲಿ ಶಾಂತಿ ಸಭೆ
ಈಗಾಗಲೇ ಕೋಣಾಜೆ ಠಾಣೆಯಲ್ಲಿ ನನ್ನ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಠಾಣೆಗಳಲ್ಲಿ ಶಾಂತಿ ಸಭೆ ನಡೆಸಲಿದ್ದೇವೆ. ಎಲ್ಲ ಧರ್ಮದ ಪ್ರಮುಖರನ್ನು ಸಭೆಗೆ ಕರೆಯಲಾಗುವುದು. ಇದರ ಜತೆಗೆ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇರಿಸಿದ್ದೇವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.

ಆ್ಯಂಟಿ ಕಮ್ಯುನಲ್ ವಿಂಗ್ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು
ಚುನಾವಣೆಯ ಸಂದರ್ಭದಲ್ಲಿ ಈ ದಳ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಸಮಾಜ ಘಾತುಕ ಶಕ್ತಿಗಳ ವಿರುದ್ಧ ನಿಗಾ ಇರಿಸಿ ಸುಮಾರು 300ಕ್ಕೂ ಅಧಿಕ ಮಂದಿಯನ್ನು ಗುರುತಿಸಿ 75 ಮಂದಿಯನ್ನು ಗಡೀಪಾರು ಮಾಡಲಾಗಿದ್ದು, 8 ಜನರ ಮೇಲೆ ಗೂಂಡಾ ಕಾಯ್ದೆ ಹೇರಲಾಗಿತ್ತು ಎಂದರು.

ವಿಶೇಷ ತಪಾಸಣೆ
ಬೋಳಿಯಾರ್‌ನಲ್ಲಿ ನಡೆದ ಚೂರಿ ಇರಿತ ಘಟನೆಯ ಹಿನ್ನೆಲೆಯಲ್ಲಿ ಗಸ್ತು ಕಾರ್ಯ ಬಿಗಿಗೊಳಿಸಲಾಗಿದೆ. ವಾಹನಗಳಲ್ಲಿ ಸಂಚರಿಸುವವರನ್ನು ಪಾಕೆಟ್ ಚೂರಿ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.

Related Articles

Latest Articles