Wednesday, December 11, 2024

ಸಂಬಂಧಿಗಳ ಮದುವೆ, ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿ ನಗ ನಗದು ದೋಚುತ್ತಿದ್ದ ಯುವಕ ಅರೆಸ್ಟ್

ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಮನೆಯಲ್ಲಿದ್ದ ನಗ ನಗದನ್ನು ಕಳವು ಮಾಡುತ್ತಿದ್ದ ಕಳ್ಳ ಕೊನೆಗೂ ಪೊಲೀಸರ ಅತಿಥಿ ಆಗಿದ್ದಾನೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ವಿವೇಕ್ (23) ಬಂಧಿತ ಆರೋಪಿ. ಮೈಸೂರಿನಲ್ಲಿ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿವೇಕ್, ಕಳೆದ ಮೂರು ವರ್ಷದಿಂದ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ.

ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಕೈಚಳ ತೋರಿಸುತ್ತಿದ್ದ. ತನ್ನ ಸಂಬಂಧಿಕರು ಯಾರಾದರೂ ಸಾವನ್ನಪ್ಪಿರುವ ವಿಚಾರ ತಿಳಿದು ಆ ಮನೆಗಳ ಬಳಿಗೆ ತೆರಳುತ್ತಿದ್ದ ಆರೋಪಿ, ಅಂತ್ಯಸಂಸ್ಕಾರಕ್ಕೆಂದು ಎಲ್ಲರೂ ಮನೆಯಿಂದ ತೆರಳಿದ ನಂತರ ಈತ ಮಾತ್ರ ಅಲ್ಲಿಯೇ ಇದ್ದು ಎಲ್ಲರೂ ಹೋದ ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ.

ಕಲ್ಯಾಣ ಮಂಟಪಗಳಲ್ಲೂ ಕೂಡ ಕಳ್ಳತನ ಮಾಡುತ್ತಿದ್ದ. ಇನ್ನು ಕದ್ದ ಚಿನ್ನಾಭರಣಗಳನ್ನ ಅಡವಿಟ್ಟು ಮೋಜು ಮಸ್ತಿ ಕೂಡ ಮಾಡುತ್ತಿದ್ದ. ಅಂದಹಾಗೆ ಕಳೆದ ಆರು ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪಾಂಡವಪುರ ತಾಲೂಕಿನ ಹಿರಮರಳ್ಳಿ, ಚಿನಕುರಳಿ, ಆರತಿ ಉಕ್ಕಡ, ಹರವು, ಡಾಮಡಹಳ್ಳಿ ಗ್ರಾಮಗಳು ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸಾವಿನ ಮನೆಗಳಲ್ಲಿ ಕಳ್ಳತನ ಮಾಡಿದ್ದ.

ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ರು. ಅದೇ ರೀತಿ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಶಿವಕುಮಾರ್ ಎಂಬುವವರ ಮನೆಯಲ್ಲಿ 135 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಿದಾಗ ಹತ್ತು ಪ್ರಕರಣಗಳು ಬೆಳಕಿಗೆ ಬಂದಿವೆ.

ಬಂಧಿತನಿಂದ ಒಟ್ಟು 36 ಲಕ್ಷ ಮೌಲ್ಯದ 521 ಗ್ರಾಂ‌ ಚಿನ್ನಾಭರಣ, ಕ್ಯಾಮರಾ ಮತ್ತು ಲೆನ್ಸ್, ಒಂದು ಬೈಕ್, ಒಂದು ಕಾರು ಜಪ್ತಿ ಮಾಡಿದ್ದಾರೆ.

Related Articles

Latest Articles