Monday, October 14, 2024

ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಮೂವರು ಅರೆಸ್ಟ್

ಮಂಡ್ಯ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಮದ್ದೂರು ಠಾಣೆ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಹಾಗೂ ಬಾಲಕಿ ಮೈಸೂರಿನ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಆರೋಪಿಯು ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಈಚೆಗೆ ಮೈಸೂರಿನಲ್ಲಿ ನಡೆದ ಯುವ ದಸರಾ ಸೇರಿದಂತೆ ವಿವಿಧೆಡೆ ಇಬ್ಬರೂ ಜೊತೆಯಲ್ಲಿ ತೆರಳಿದ್ದರು.

ನ.4ರಂದು ಮದ್ದೂರಿಗೆ ಬಾಲಕಿಯನ್ನು ಕರೆಸಿಕೊಂಡಿದ್ದ ಆರೋಪಿ ಬೆಂಗಳೂರು- ಮೈಸೂರು ಹೆದ್ದಾರಿ ಬದಿಯ ಲಾಡ್ಜ್ ಗೆ ಕರೆದೊಯ್ದಿದ್ದ. ನಂತರ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಖಾಸಗಿ ಕ್ಷಣಗಳ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದ.

ನಂತರ ತನ್ನ ಇಬ್ಬರು ಗೆಳೆಯರನ್ನು ಲಾಡ್ಜ್ ಗೆ ಕರೆಸಿ ಅವರ ಜೊತೆಯೂ ಸಹಕರಿಸುವಂತೆ ಬಾಲಕಿಯನ್ನು ಪೀಡಿಸಿದ್ದ. ಸಹಕರಿಸದಿದ್ದರೆ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಸಿದ್ದ. ನಂತರ ಮೂವರೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು, ಎಲ್ಲವನ್ನೂ ಚಿತ್ರೀಕರಣ ಮಾಡಿಕೊಂಡಿದ್ದರು.

ಘಟನೆ ಕುರಿತು ಯಾರಿಗಾದರೂ ವಿಷಯ ತಿಳಿಸಿದರೆ ಎಲ್ಲಾ ವಿಡಿಯೊ ಬಿಡುವುದಾಗಿ ಆರೋಪಿಗಳೆಲ್ಲರೂ ಬೆದರಿಕೆ ಹಾಕಿದ್ದರು. ಜೊತೆಗೆ ಕರೆದಾಗಲೆಲ್ಲಾ ಬರಬೇಕು ಎಂದೂ ತಾಕೀತು ಮಾಡಿದ್ದರು.

ಆರೋಪಿಗಳು ಮತ್ತೆ ಮತ್ತೆ ಕರೆ ಮಾಡಿ ಬೆದರಿಸುತ್ತಿದ್ದ ಕಾರಣ ಬಾಲಕಿ ಘಟನೆ ಕುರಿತು ತನ್ನ ತಾಯಿ ಬಳಿ ಹೇಳಿಕೊಂಡಿದ್ದರು. ತಾಯಿ ಮದ್ದೂರು ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ, ಜಾತಿ ನಿಂದನೆ, ಕೊಲೆ ಬೆದರಿಕೆಯ ದೂರು ದಾಖಲಿಸಿದ್ದರು.

‘ಆರೋಪಿಗಳೆಲ್ಲರೂ ಬಾಲಕಿಯ ಅಕ್ಕಪಕ್ಕದ ಗ್ರಾಮದವರೇ ಆಗಿದ್ದಾರೆ. ಬಾಲಕಿಯನ್ನು ಕರೆದೊಯದ್ದಿದ್ದ ಪ್ರಮುಖ ಆರೋಪಿ ಹಾಗೂ ಆತನ ಗೆಳೆಯ ಬಾಲಕರಾಗಿದ್ದು ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಮತ್ತೊಬ್ಬ ಆರೋಪಿ ಪ್ರಾಪ್ತ ವಯಸ್ಕನಾಗಿದ್ದು ಜೈಲಿಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

Related Articles

Latest Articles