ಕಾಸರಗೋಡು: ಲೋಕಸಭೆ ಚುನಾವಣೆಯ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಕೇರಳದ 20 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 12 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ ಕೇಂದ್ರ ಸಚಿವ ವಿ.ಮುರಳೀಧರನ್ ಹಾಗೂ ರಾಜೀವ್ ಚಂದ್ರಶೇಖರ್ ಪಟ್ಟಿಯಲ್ಲಿದ್ದಾರೆ. ಇನ್ನು ಕಳೆದೆರಡು ದಶಕದಿಂದಲೂ ಗೆಲುವಿನ ಕನಸು ಕಾಣುತ್ತಿರುವ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮಹಿಳಾ ಅಭ್ಯರ್ಥಿಗೆ ಟಿಕೆಟ್ ಕೊಡಲಾಗಿದೆ. ಆ ಮೂಲಕ ಮಹತ್ತರವಾದ ಹೆಜ್ಜೆಯನ್ನಿರಿಸಿದ ಬಿಜೆಪಿ.
ಇಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ, ಮಂಜೇಶ್ವರ ಬ್ಲಾಕ್ ಪಂಚಾಯಿತಿಯ ಕಡಂಬಾರು ವಾರ್ಡ್ ಸದಸ್ಯೆ ಎಂ ಎಲ್ ಅಶ್ವಿನಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಇದೇ ಮೊದಲ ಬಾರಿಗೆ ಕಾಸರಗೋಡು ಕ್ಷೇತ್ರದಿಂದ ಮಹಿಳೆಗೆ ಲೋಕಸಭೆ ಅಭ್ಯರ್ಥಿ ಸ್ಥಾನ ನೀಡಲಾಗಿದೆ. ಈ ಹಿಂದೆ ಇತರ ನೇತಾರರ ಹೆಸರು ಕೇಳಿ ಬಂದರೂ ಕೊನೆಗೆ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಪ್ರತಿಬಾರಿಯಂತೆ ಈ ಬಾರಿಯೂ ಅನೇಕ ಹೆಸರುಗಳಿದ್ದವು. ಅಶ್ವಿನಿ ಅವರೊಂದಿಗೆ ರಾಜ್ಯ ಬಿಜೆಪಿ ಪದಾಧಿಕಾರಿ ಪಿಕೆ ಕೃಷ್ಣಾದಾಸ್ ಮತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪ್ರಮೀಳಾ ಸಿ ನಾಯಕ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇನ್ನು ಜಿಲ್ಲೆಯ ಪ್ರಬಲ ಮುಖಂಡರಾಗಿರುವ ಪಕ್ಷದ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಅವರು ತಾನು ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಹೇಳಿದ್ದರೂ ಸಂಭಾವ್ಯವರ ಪಟ್ಟಿಯಲ್ಲಿ ಅವರ ಹೆಸರನ್ನೂ ಸ್ಥಳೀಯ ಬಿಜೆಪಿ ಸೂಚಿಸಿತ್ತು. ಅಂತಿಮವಾಗಿ ಅಶ್ವಿನಿ ಹೆಸರನ್ನು ಘೋಷಿಸಿದೆ.
ಎನ್‌ಡಿಎ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಎಂ ಎಲ್ ಅಶ್ವಿನಿ ಅವರು ಪ್ರಸ್ತುತ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆಯಾಗಿದ್ದಾರೆ. ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಪಜ್ವ ನಿವಾಸಿಯಾಗಿದ್ದು, ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.