Monday, October 14, 2024

ದಕ್ಷಿಣ ಕನ್ನಡ: ಲೋಕಸಭಾ ಎಲೆಕ್ಷನ್‌ ಫೈಟ್ – ಪದ್ಮರಾಜ್ ರಾಮಯ್ಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಘೋಷಣೆಯಾಗಿದೆ. ಇನ್ನೊಂದೆಡೆ, ಬಂಡಾಯವೆದ್ದಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷಕ್ಕೆ ವಾಪಸ್ ಆಗಿದ್ದು, ಬಿಜೆಪಿಗೆ ಮತ್ತಷ್ಟು ಬಲ ತಂದಿದೆ. ಈ ನಡುವೆ, ಚೌಟಗೆ ಪ್ರಬಲ ಎದುರಾಳಿ ಅಭ್ಯರ್ಥಿ ಆಯ್ಕೆ ಮಾಡಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಕಳೆದ ಬಾರಿ ಬಂಟ ಸಮುದಾಯಕ್ಕೆ ಮಣೆ‌ ಹಾಕಿದ್ದ ಕೈಕೂಟ ಈ ಬಾರಿ ಬಿಲ್ಲವ ಸಮುದಾಯದ ನಾಯಕನಿಗೆ ಮಣೆ ಹಾಕಲು ಪ್ಲಾನ್ ಮಾಡಿದ್ದಾಗಿ ತಿಳಿದುಬಂದಿದೆ.

ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಂಟ ಸಮುದಾಯಕ್ಕೆ ಸೇರಿದವರಾಗಿದ್ದು, ಇದೇ ಸಮುದಾಯಕ್ಕೆ ಸೇರಿದ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಕೂಡ ಬಂಟ ಸಮುದಾಯದ ಮಿಥುನ್ ರೈ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಮೋದಿ ಅಲೆಗೆ ಮಿಥುನ್ ರೈ ಸೋಲು ಅನುಭವಿಸಿದ್ದರು. ಆದರೆ, ಈ ಬಾರಿ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿದ ಕಾಂಗ್ರೆಸ್, ಜಿಲ್ಲೆಯ ಅತಿ ದೊಡ್ಡ ಸಮುದಾಯವಾದ ಬಿಲ್ಲವ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪ್ರಬಲ ಪೈಪೋಟಿ ನಡೆಸಲು ಪ್ಲಾನ್ ಮಾಡಿದೆ.

ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಆಪ್ತರಾಗಿರುವ ಪದ್ಮರಾಜ್ ರಾಮಯ್ಯ ಅವರಿಗೆ ಟಿಕೆಟ್ ನೀಡಲು ಪಕ್ಷದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದಾಗಿ ಸುದ್ದಿ ಸಂಸ್ಥೆ ದೈಜಿವರ್ಲ್ಡ್ ವರದಿ ಮಾಡಿದೆ. ಅದಾಗ್ಯೂ, ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಸುಧಾಕರ್ ಅವರಂತಹ ಅನುಭವಿ ಅಭ್ಯರ್ಥಿಗಳು ಟಿಕೆಟ್​ ರೇಸ್​ನಲ್ಲಿದ್ದಾರೆ.

Related Articles

Latest Articles