ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗುಡ್ಡ ಕುಸಿದ ಪರಿಣಾಮ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಸದ್ಯ ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲ ಎಂಬಲ್ಲಿ ಹೆದ್ದಾರಿ ಮೇಲೆ ಶುಕ್ರವಾರ ಮುಂಜಾನೆ ಗುಡ್ಡ ಕುಸಿದು ಬಿದ್ದಿದೆ.
ಪರಿಣಾಮವಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸದ್ಯ ಮಡಿಕೇರಿ ಹಾಗೂ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಬದಲಿ ರಸ್ತೆಯಾಗಿ ಪುತ್ತೂರು ಸಿಟಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲಾ, ಪಿಯು ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ.