ಹಾಸನ: ಕಳೆದ ಹಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯ ಕಥೆ ದುರಂತ ಅಂತ್ಯ ಕಂಡಿದೆ. ಪ್ರಿಯಕರ ಪ್ರಿಯತಮೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಇದಕ್ಕೆಲ್ಲಾ ಬ್ರೇಕಪ್ ಮೂಲ ಕಾರಣ ಎನ್ನಲಾಗಿದೆ. ಬ್ರೇಕ್ ಅಪ್ ವಿಚಾರವಾಗಿ ಮರು ಸಂಧಾನದ ಮಾತುಕತೆ ಎಂದು ಆಕೆಯನ್ನು ಆಹ್ವಾನಿಸಿದ ಹುಡುಗ ಆಕೆಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಹಾಸನ ತಾಲೂಕಿನ ಅಗಿಲೆ ಗ್ರಾಮದ ಬಳಿಯ ಕುಂತಿಬೆಟ್ಟದಲ್ಲಿ ನಡೆದ ಭೀಕರ ಘಟನೆ. ಕೊಲೆಯಾದ ಯುವತಿಯ ಹೆಸರು ಸುಚಿತ್ರಾ (21), ಕೊಲೆ ಮಾಡಿದವನು ತೇಜಸ್ (21).
ಸುಚಿತ್ರಾ ಮತ್ತು ತೇಜಸ್ ಇಬ್ಬರೂ ಇಬ್ಬರೂ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು. ಒಂದೇ ತರಗತಿಯಲ್ಲಿದ್ದ ಇಬ್ಬರೂ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಆದರೆ, ಈ ನಡುವೆ ಅವರ ಮಧ್ಯೆ ಯಾವುದೋ ಕಾರಣಕ್ಕೆ ಜಗಳವಾಗಿ ಲವ್ ಬ್ರೇಕಪ್ ಆಗಿತ್ತು.

ಪರಸ್ಪರ ಮಾತನಾಡಿ ಜಗಳ ಪರಿಹರಿಸಿಕೊಳ್ಳೋಣ ಎಂದು ತೇಜಸ್ ಸುಚಿತ್ರಾಳಿಗೆ ತಿಳಿಸಿದ್ದ. ಮಾತುಕತೆಗಾಗಿ ಅವನು ಆಕೆಯನ್ನು ಕರೆಸಿಕೊಂಡದ್ದು ಅಗಿಲೆ ಗ್ರಾಮದ ಬಳಿಯ ಕುಂತಿಬೆಟ್ಟಕ್ಕೆ.
ಆತನ ಮಾತು ನಂಬಿ ಸುಚಿತ್ರಾ ಕುಂತಿಬೆಟ್ಟಕ್ಕೆ ಬಂದಿದ್ದಳು. ಅಲ್ಲಿ ಅವರಿಬ್ಬರೂ ತುಂಬ ಹೊತ್ತು ಮಾತನಾಡಿದ್ದಾರೆ. ಆದರೆ, ಕೊನೆಗೆ ಆತ ಆಕೆಯ ಕತ್ತನ್ನೇ ಸೀಳಿ ಕೊಲೆ ಮಾಡಿದ್ದಾನೆ. ಈ ರೀತಿ ಕೊಲೆ ಮಾಡಿದ್ದನ್ನು ನೋಡಿದ ಕುಂತಿ ಬೆಟ್ಟಕ್ಕೆ ಬಂದಿದ್ದ ಇತರರು ಪೊಲೀಸರಿಗೆ ತಿಳಿಸಿದರು. ಕೂಡಲೇ ಪೊಲೀಸರು ಧಾವಿಸಿದರು. ಆದರೆ, ಅಷ್ಟು ಹೊತ್ತಿಗೆ ಸುಚಿತ್ರಾ ಜೀವ ಹೋಗಿ ಆಗಿತ್ತು.
ಹರಿತವಾದ ಆಯುಧದಿಂದ ಆಕೆಯ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ್ದನ್ನು ನೋಡಿದರೆ ಆತ ಕೊಲೆಗೆ ಮೊದಲೇ ಸ್ಕೆಚ್ ಹಾಕಿ ಆಕೆಯನ್ನು ಮಾತುಕತೆಯ ನಾಟಕವಾಡಿ ಕೊಲೆ ಮಾಡಿದ್ದಾನೆ ಎಂದು ಅಂದಾಜಿಸಲಾಗಿದೆ. ಸುಚಿತ್ರಾ ಬಿ.ಟಿ. ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದಾಳೆ.
ತನ್ನದೇ ಸಹಪಾಠಿಯನ್ನು ಪ್ರೀತಿಯ ನೆಪದಲ್ಲಿ ಕೊಂದು ಮುಗಿಸಿದ ಆತನನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.