Thursday, November 14, 2024

ಪುರುಷರು ಈ ದೇಗುಲಕ್ಕೆ ಹೋಗಲು ಹೆಣ್ಣಾಗಿರಬೇಕು; ಏನಿದು ವಿಶಿಷ್ಟ ಆಚರಣೆ ಗೊತ್ತಾ?

ದೇವರ ನಾಡು ಕೇರಳದಲ್ಲಿ ಅದೆಷ್ಟು ದೇವಾಲಯಗಳಿವೆ. ಅದರಲ್ಲೂ ಈ ದೇವಿ ದೇವಸ್ಥಾನ ತುಂಬಾ ವಿಶೇಷ. ಇಲ್ಲಿ ಪುರುಷರು ಮಹಿಳೆಯರಂತೆ ಅಲಂಕಾರ ಮಾಡಿಕೊಂಡರೆ ಪ್ರವೇಶ. ಇಲ್ಲವಾದರೆ, ದೇವಾಲಯದೊಳಗೆ ನೋ ಎಂಟ್ರಿ. ಪಕ್ಕಾ ಹುಡುಗಿಯರಂತೆ ಸ್ಯಾರಿ ಹಾಕೊಂಡು ಮಿಂಚ್ತಿರೋ ಹುಡುಗಿಯರೆಲ್ಲ. ಬದಲಾಗಿ ಮಹಿಳೆಯರ ವೇಷದಲ್ಲಿರುವ ಯುವಕರು.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕೊಟ್ಟಂಕುಳಂಗರ ದೇವಿ ದೇವಸ್ಥಾನವಿದ್ದು ಇಲ್ಲಿ ಪ್ರತಿ ವರ್ಷ ಚಾಮ್ಯವಿಳಕ್ಕು ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವಕ್ಕೆ ಪ್ರತಿ ವರ್ಷ ಸಾವಿರಾರು ಪುರುಷ ಭಕ್ತರು ಆಗಮಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಪುರುಷರು ಪುರುಷರಂತೆ ದೇವಾಲಯವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ದೇವಾಲಯದಲ್ಲಿ ಅವರಿಗಾಗಿ ಪ್ರತ್ಯೇಕ ಮೇಕಪ್ ರೂಂ ರೆಡಿ ಮಾಡಿರಲಾಗುತ್ತೆ. ಅಲ್ಲಿ ಪುರುಷರು ಮಹಿಳೆಯರಂತೆ ಸೀರೆ ಮತ್ತು ಆಭರಣಗಳನ್ನು ಧರಿಸುತ್ತಾರೆ. ಮೇಕಪ್ ಮಾಡುವುದರ ಜೊತೆಗೆ ಕೇಶಾಲಂಕಾರವನ್ನು ಕೂಡ ಮಾಡ್ಕೊಂಡು ದೇವರ ಪೂಜೆ ಸಲ್ಲಿಸ್ತಾರೆ.

ಬಹುಶಃ ಪ್ರಪಂಚದಲ್ಲಿ ಎಲ್ಲಿಯೂ ಇಂತಹ ಒಂದು ಸಂಪ್ರದಾಯ ಇರಲಿಕ್ಕಿಲ್ಲ. ಇಲ್ಲಿ ಪ್ರತಿ ವರ್ಷ ಮಾರ್ಚ್‌ ತಿಂಗಳ 21 ಹಾಗೂ 22 ತಾರೀಖಿನಂದು ಚಮಯವಿಳಕ್ಕು ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಕೇರಳ ರಾಜ್ಯದ ವಿವಿಧ ಜಿಲ್ಲೆಯ ಪುರುಷರು ಮಹಿಳೆಯರ ವೇಷ ತೊಟ್ಟು ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೆಂಗಸರ ವೇಷ ಧರಿಸಿದ ಗಂಡಸರು ಮೆರವಣಿಗೆ ಹಾಗೂ ಪೂಜೆ ಸಮಯದಲ್ಲಿ ಕೈಯಲ್ಲಿ ದೀಪ ಹಿಡಿದು ಭಾಗಿಯಾಗ್ತಾರೆ.

ಈ ದೇವಾಲಯದಲ್ಲಿ ಸ್ಥಾಪಿಸಲಾದ ದೇವಿಯ ವಿಗ್ರಹವು ಸ್ವಯಂಭು ವಿಗ್ರಹ ಎನ್ನುವ ನಂಬಿಕೆಯಿದೆ. ಈ ದೇವಾಲಯದಲ್ಲಿ ಪುರುಷರು ಮತ್ತು ಮಹಿಳೆಯರಲ್ಲದೆ, ಮಂಗಳಮುಖಿಯರು ಕೂಡ ಪೂಜೆಗೆ ಬರುತ್ತಾರೆ.

ಹೀಗೆ ಪೂಜೆ ಮಾಡುವುದರಿಂದ ಉದ್ಯೋಗ, ಸಂಪತ್ತು ಪ್ರಾಪ್ತಿಯಾಗುವ ಜೊತೆಗೆ ಮದುವೆಯಾಗದ ಪುರುಷರಿಗೆ ಹೆಣ್ಣು ಸಿಗುತ್ತಾಳೆ ಎಂಬುದು ನಂಬಿಕೆಯಾಗಿದೆ. ಇದೇ ಕಾರಣಕ್ಕೆ ಹುಡುಗರೆಲ್ಲ ಹುಡುಗಿಯರಾಗಿ ಪೂಜೆ ಸಲ್ಲಿಸ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಉತ್ಸವದ ಫೋಟೊಗಳು, ವಿಡಿಯೊಗಳು ವೈರಲ್​ ಆಗಿದ್ದು, ಸದ್ಯ ಹೆಣ್ಮಕ್ಕಳ ವೇಷದಲ್ಲಿರುವ ಹುಡುಗರ ಅಂದ ನೋಡಿ ಹುಡುಗಿಯರು ಹೊಟ್ಟೆ ಕಿಚ್ಚು ಪಡ್ತಿರೋದಂತು ಸುಳ್ಳಲ್ಲ.

Related Articles

Latest Articles