Wednesday, July 24, 2024

ಕೊಡಗು: ಡ್ರಾಪ್ ಕೇಳಿದ ಬಾಲಕಿ‌ಯ ಮೇಲೆ ಅತ್ಯಾಚಾರ: ತಮ್ಮೊಂದಿಗೆ ಬಂದಿದ್ದ ಯುವಕರಿಂದಲೇ ಕೃತ್ಯ – ಐವರ ಬಂಧನ

ಕೊಡಗು: ಡ್ರಾಪ್ ಕೇಳಿದ ಬಾಲಕಿ‌ ಮೇಲೆ ಯುವಕರು ಅತ್ಯಾಚಾರ ಮಾಡಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಜೂನ್ 9 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮತ್ತೋರ್ವ ಬಾಲಕಿ‌ ಮೇಲೂ ಅತ್ಯಾಚಾರಕ್ಕೆ ಯತ್ನಿಸಲಾಗಿದೆ.

ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ‌ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕುಟ್ಟನಾಥಂಗಾಲದ ನವೀಂದ್ರ (24), ಅಕ್ಷಯ್ (27), ಕೇರಳದ ತೋಲ್ಪಟ್ಟಿ ನಡುಂದನ ಕಾಲೋನಿಯ ರಾಹುಲ್ (21), ಮನು (25) ಹಾಗೂ ಸಂದೀಪ (27) ಬಂಧಿತ ಆರೋಪಿಗಳು. ಆರೋಪಿಗಳಿಂದ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ : ಜುಲೈ 9 ರಂದು ಮಧ್ಯಾಹ್ನ ಸುಮಾರು 3.15 ಗಂಟೆ ಸಮಯದಲ್ಲಿ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ರಸ್ತೆಯಲ್ಲಿ 5 ಜನರು (2 ಅಪ್ರಾಪ್ತ ಬಾಲಕಿ & 3 ಗಂಡು ) ತೆರಳುವ ಸಂದರ್ಭ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು (ಮಾರುತಿ 800) ನಿಲ್ಲಿಸಿದ್ದು, ಕಾರಿನಲ್ಲಿ ಇದ್ದ ಅಪರಿಚಿತ ಇಬ್ಬರು ವ್ಯಕ್ತಿಗಳೊಂದಿಗೆ ನಾಗರಹೊಳೆ ಕಡೆ ಬಿಡುವಂತೆ ಕೇಳಿ ಕಾರಿನಲ್ಲಿ 05 ಜನ ಪ್ರಯಾಣಿಸಿದ್ದಾರೆ.

ಸ್ವಲ್ಪ ದೂರ ತೆರಳಿದ ನಂತರ ರಸ್ತೆ ಬದಿಯ ಕಾಫಿ ತೋಟದ ಬಳಿ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಅಪರಿಚಿತ ಇಬ್ಬರೂ ವ್ಯಕ್ತಿಗಳು ಒಂದು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಿದ್ದು ಹಾಗೂ ಜೊತೆಯಲ್ಲಿ ಬಂದಿದ್ದ ಮೂರು ಹುಡುಗರು ಮತ್ತೊಂದು ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಕುರಿತು ದೂರು ಸ್ವೀಕರಿಸಿದ್ದು, ಕುಟ್ಟ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.

ಸದರಿ ಪ್ರಕರಣದ ನಡೆದ ಸ್ಥಳಕ್ಕೆ ಕೊಡಗು ಎಸ್ಪಿ ಕೆ. ರಾಮರಾಜನ್ ಮತ್ತಿತರ ಸಿಬ್ಬಂದಿಗಳು ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ದೂರುದಾರರು ನೀಡಿದ ಮಾಹಿತಿ ಅನ್ವಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಮತ್ತು ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಾದ 12 ಗಂಟೆಯಲ್ಲಿ 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳನ್ನು 12 ಗಂಟೆಗಳಲ್ಲಿ ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೊಡಗು ಎಸ್ಪಿ ಕೆ. ರಾಮರಾಜನ್ ಶ್ಲಾಘಿಸಿರುತ್ತಾರೆ.

Related Articles

Latest Articles