ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೆ ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇಂದು ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಮತದಾನದ ಹಕ್ಕು ಚಲಾಯಿಸಿದ ಬಳಿಕ ಕಿಲಾಡಿ ಅಕ್ಷಯ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಮತದಾನದ ಬಳಿಕ ಮಾತನಾಡಿದ ಅಕ್ಷಯ್ ಕುಮಾರ್, ನನ್ನ ಭಾರತ ವಿಕಸಿತ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರಬೇಕು. ಇದೇ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾನು ಇವತ್ತು ಮತ ಚಲಾಯಿಸಿದ್ದೇನೆ. ಭಾರತದ ಜನರು ತಮ್ಮ ಸ್ವವಿವೇಚನೆಯಿಂದ ಆಲೋಚಿಸಿ ಮತ ಹಾಕಬೇಕು ಎಂದು ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡರು.
ಈ ಬಾರಿ ಹೆಚ್ಚು ಮತದಾನ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಕ್ಷಯ್, ಇಂದು ಬೆಳಗ್ಗೆ ಏಳು ಗಂಟೆಗೆ ಮತಗಟ್ಟೆ ಬಂದಾಗ ಅಪಾರ ಸಂಖ್ಯೆಯ ಜನರು ಸೇರಿದ್ದರು. ಈಗಲೂ ಸುಮಾರು 200 ರಿಂದ 300 ಜನರು ಮತಗಟ್ಟೆಯೊಳಗೆ ನಿಂತಿದ್ದಾರೆ. ಹಾಗಾಗಿ ಈ ಬಾರಿ ಹೆಚ್ಚು ಮತದಾನ ಆಗಲಿದೆ ಎಂದು ಹೇಳಿದ ಅಕ್ಷಯ್ ಕುಮಾರ್ ರಾಜಕೀಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ಅಕ್ಷಯ್ ಕುಮಾರ್ 2023ರ ಆಗಸ್ಟ್‌ನಲ್ಲಿ ಭಾರತದ ಪೌರತ್ವ ಪಡೆದುಕೊಂಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೌರತ್ವ ಪಡೆದ ಪ್ರಮಾಣಪತ್ರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.
ಅಕ್ಷಯ್ ಕುಮಾರ್ 1990ರಲ್ಲಿ ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಸಮಯದಲ್ಲಿ ಅಕ್ಷಯ್ ಕುಮಾರ್ ನಟನೆಯ 15ಕ್ಕೂ ಹೆಚ್ಚು ಸಿನಿಮಾಗಳು ಯಶಸ್ಸು ಕಂಡಿರಲಿಲ್ಲ. ತದನಂತರ ಮತ್ತೆ ಸಿನಿಮಾಗಳಲ್ಲಿ ಯಶಸ್ಸು ಸಿಗುತ್ತಿದ್ದಂತ 2019ರಲ್ಲಿ ಮತ್ತೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಿ, ನಾಗರೀಕತ್ವ ಪಡೆದುಕೊಂಡಿದ್ದರು.