ಬೆಂಗಳೂರು: ವ್ಯಕ್ತಿಯೊಬ್ಬ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿ ಅದೇ ದಿನ ಮಧ್ಯಾಹ್ನ ಮಾಲೀಕನ 4 ವರ್ಷದ ಮಗಳನ್ನೇ ಅಪಹರಿಸಿಕೊಂಡು ಹೋದ ಘಟನೆ ಬನಶಂಕರಿ ಠಾಣೆ ವ್ಯಾಪ್ತಿಯ ಕಾವೇರಿಪುರದಲ್ಲಿ ಇತ್ತೀಚೆಗೆ ನಡೆದಿದೆ. ಡಿಸೆಂಬರ್ 28ರಂದು ಆರೋಪಿಯು ಕೃತ್ಯ ಎಸಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯನ್ನು ವಸೀಂ ಎಂದು ಗುರುತಿಸಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಾವೇರಿಪುರದಲ್ಲಿರುವ ಶಫೀವುಲ್ಲ ಎಂಬುವವರ ಫರ್ನಿಚರ್ ಶಾಪ್ಗೆ ಆರೋಪಿ ವಸೀಂ ಡಿಸೆಂಬರ್ 28ರ ಬೆಳಗ್ಗೆ ಕೆಲಸಕ್ಕೆ ಸೇರಿದ್ದಾನೆ. ಈ ಹಿಂದೆ ಶಫೀವುಲ್ಲಾರ ಬಳಿ ಕೆಲಸ ಮಾಡಿ ಬಿಟ್ಟುಹೋಗಿದ್ದ ಆರೋಪಿ ವಸೀಂ, ಡಿಸೆಂಬರ್ 28 ರಂದು ಮತ್ತೆ ಬಂದು ಕೆಲಸ ಕೊಡಿ ಎಂದು ಅಂಗಲಾಚಿದ್ದ. ಕಣ್ಣಿರು ಹಾಕಿ ಕೆಲಸ ಕೊಡಿ ಎಂದು ಮನವಿ ಮಾಡಿದ್ದರಿಂದ ಮನಕರಗಿ ಶಫೀವುಲ್ಲಾ ಆತನಿಗೆ ಕೆಲಸ ಕೊಟ್ಟಿದ್ದರು. ಬಳಿಕ ಆತ ಕೆಲಸಕ್ಕೆ ಸೇರಿದ್ದ.
ಕೆಲಸಕ್ಕೆ ಸೇರಿದ ದಿನವೇ ಮಧ್ಯಾಹ್ನದ ವೇಳೆಗೆ ಚಾಕಲೇಟ್ ಕೊಡಿಸ್ತೇನೆಂದು ಮಗುವನ್ನ ಪುಸಲಾಯಿಸಿ ಕರೆದುಕೊಂಡು ವಸೀಂ ಪರಾರಿಯಾಗಿದ್ದಾನೆ ಎಂದು ಶಫೀವುಲ್ಲಾ ಆರೋಪಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಶಫೀವುಲ್ಲಾ ಬನಶಂಕರಿ ಪೊಲೀಸ್ ಠಾಣೆಗೆ ಹಾಗೂ ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಗೆ ದೂರು ನೀಡಿದ್ದಾರೆ.
ಶಫೀವುಲ್ಲಾ ಪತ್ನಿಯಿಂದ ವಿಚ್ಛೇದನ ಪಡೆದು ಮಗಳೊಂದಿಗೆ ವಾಸವಾಗಿದ್ದರು. ಸದ್ಯ ಮಗಳನ್ನು ನೆನೆದು ದುಃಖಿತರಾಗಿದ್ದಾರೆ. ಕಿಡ್ನಾಪ್ ಕೇಸ್ ದಾಖಲಿಸಿರುವ ಬನಶಂಕರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.