Wednesday, July 24, 2024

ಬಟ್ಟೆ ಒಗೆಯಲು, ಕಾಲು ಸಂಕವಾದ ಕನ್ನಡ ಶಾಸನ..! – ಕಾಶೀ ಪೀಠದ ಜಗದ್ಗುರುಗಳಿಂದ ಸೂಕ್ತ ಕ್ರಮ

ಕಾಶಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಅಲ್ಲಿನ ಜನರು ಬಟ್ಟೆ ಒಗೆಯಲೆಂದು ಬಳಸುತ್ತಿದ್ದ ಕೆಳದಿ ಅರಸರ ಕಾಲದ ಕನ್ನಡ ಶಾಸನದ ರಕ್ಷಣೆಗೆ ಕಾಶೀ ಪೀಠ ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಇತ್ತೀಚೆಗೆ ಕಾಶಿಯಲ್ಲಿ ಕನ್ನಡ ಶಾಸನ ಒಂದನ್ನು ಬಟ್ಟೆ ತೊಳೆಯುವುದಕ್ಕೆ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶ್ರೀಪೀಠದ ವ್ಯವಸ್ಥಾಪಕರಾದ ಶಿವಾನಂದ ಹಿರೇಮಠ ಹಾಗೂ ವಕೀಲರಾದ ಉದಯಭಾನು ಸಿಂಹ ಅವರನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿಯನ್ನು ಅವಲೋಕಿಸಿದ್ದಾರೆ.

ಕಾಶೀ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದಲ್ಲಿ ಕೆಳದಿ ಅರಸರು ಪಂಚಕ್ರೋಶಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಸರೋವರದ ಬಳಿ ಕನ್ನಡದ ಶಾಸನವಿದ್ದು, ಕೆಳದಿ ರಾಜ ಶಿವಪ್ಪನಾಯಕರು ಸರೋವರ ನಿರ್ಮಿಸಿರುವ ಮಾಹಿತಿ ಶಾಸನದಲ್ಲಿ ಕಂಡು ಬಂದಿದೆ.

ಸ್ಥಳೀಯರು ಶಾಸನದ ಮಹತ್ವ ಅರಿಯದೆ ಸರೋವರದ ಮೇಲೆ ದಾಟುಗಲ್ಲಾಗಿ ಬಳಸಿಕೊಂಡಿರುವುದು, ಹಾಗೂ ಕೆಲವರು ಬಟ್ಟೆ ತೊಳೆಯಲು ಬಳಸುತ್ತಿರುವದು ಗಮನಕ್ಕೆ ಬಂದಿದೆ. ಈ ಸರೋವರ ಇರುವ ಜಾಗವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದು, ಗ್ರಾಮಾಧಿಕಾರಿಯ ಅನುಮತಿ ಪಡೆದು ಶಾಸನವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲು ಕ್ರಮಕೈಗೊಳ್ಳಲಾಗುವುದು, ಎಂದು ಕಾಶೀ ಜಗದ್ಗುರುಗಳು ಮಾಧ್ಯಮದ ಮೂಲಕ ಕನ್ನಡಿಗರಿಗೆ ಭರವಸೆ ನೀಡಿದ್ದಾರೆ.

Related Articles

Latest Articles