ಕಾಸರಗೋಡು: ಉತ್ಸವ ವೇಳೆ ಆವೇಷಗೊಂಡ ದೈವವನ್ನು ಕಂಡು ಭಯಗೊಂಡು ಓಡಿದ ಬಾಲಕ ಬಿದ್ದು ಗಾಯಗೊಂಡಿದ್ದು, ಇದರಿಂದ ರೋಷಗೊಂಡ ತಂಡವೊಂದು ದೈವವೇಷ ಧರಿಸಿದ ಕಲಾವಿದನಿಗೆ ಹಲ್ಲೆಗೈದ ಘಟನೆ ಕಣ್ಣೂರು ಬಳಿ ತಿಲ್ಲಂಗೇರಿ ಎಂಬಲ್ಲಿ ನಡೆದಿದೆ.
ಈ ಘಟನೆಯ ಬಗ್ಗೆ ಕಾರವಾಲ್ ಮಾಧ್ಯಮ ವರದಿ ಪ್ರಕಟಿಸಿದೆ. ಪೆರಿಂಗಾನಂ ಉದಯಂಕುನ್ನು ಮಡಪ್ಪುರ ಉತ್ಸವದಂಗವಾಗಿ ಫೆ. 7ರ ಸಂಜೆ ಕೈದ ಚಾಮುಂಡಿ ದೈವಕೋಲ ನಡೆದಿತ್ತು. ಮಡಪ್ಪುರಕ್ಕೆ ಆಗಮಿಸುತ್ತಿದ್ದಂತೆ ದೈವ ಆವೇಷಗೊಂಡಿದ್ದು, ಇದರಿಂದ ಹೆದರಿ ಬಾಲಕ ಓಡುತ್ತಿದ್ದಾಗ ಬಿದ್ದು ಗಾಯಗೊಂಡಿದ್ದಾನೆನ್ನಲಾಗಿದೆ.
ಇದರಿಂದ ರೋಷಗೊಂಡ ಒಂದು ತಂಡ ದೈವ ಕಲಾವಿದನಿಗೆ ಹಲ್ಲೆಗೈದಿದೆ. ಪೊಲೀಸರು ಹಾಗೂ ಉತ್ಸವ ಸಮಿತಿಯವರು ಸೇರಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇದೇ ವೇಳೆ ಘಟನೆ ಬಗ್ಗೆ ದೂರು ಲಭಿಸದ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿಲ್ಲವೆನ್ನಲಾಗಿದೆ.