ಕಾಸರಗೋಡು: ಅಂಗಡಿ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್‌ನಿಂದ 26 ಸಾವಿರ ಹಣ ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆಂಗಳ ಸಂತೋಷ್‌ನಗರ್ ನಿವಾಸಿ ಹಾಗೂ ನೆಲ್ಲಿಕಟ್ಟೆ ಶಕ್ತಿನಗರದಲ್ಲಿ ವಾಸಿಸುತ್ತಿರುವ ಬಿ.ಕೆ. ಮೊಯ್ದಿನ್ ನಿಸಾಫ್(38) ಬಂಧಿತ ಆರೋಪಿ.
ಆದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಿನ್ನೆ ಹಾಡಹಗಲೇ ಬೋವಿಕ್ಕಾನ ಅಮ್ಮಂಗೋಡು ಗೋಳಿಯಡ್ಕ ನಿವಾಸಿ ಪುರುಷೋತ್ತಮರ ಸ್ಕೂಟರ್ ನಿಂದ ಹಣ ಕಳವುಗೈಯ್ಯಲಾಗಿತ್ತು. ಚೆರ್ಕಳ- ಜಾಲ್ಲೂರು ರಸ್ತೆಯ 8ನೇ ಮೈಲಿನಲ್ಲಿರುವ ಸ್ವಂತ ಸಂಸ್ಥೆಯ ಮುಂಭಾಗದಲ್ಲಿ ಪುರುಷೋತ್ತಮನ್ ಸ್ಕೂಟರನ್ನು ನಿಲ್ಲಿಸಿದ್ದರು. ಬೈಕ್‌ನಲ್ಲಿ ತಲುಪಿದ ತಂಡ ಕಳವಿನ ಹಿಂದಿದೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಸ್ಥಳೀಯ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳನ ಬಗ್ಗೆ ಕುರುಹು ಲಭಿಸಿದ್ದು, ಗಂಟೆಗಳೊಳಗೆ ಈತನನ್ನು ಬಂಧಿಸಲಾಗಿದೆ.