Wednesday, November 6, 2024

ಕಾಸರಗೋಡು: ನಿದ್ರಿಸುತ್ತಿದ್ದ ಬಾಲಕಿಯನ್ನು ಹೊತ್ತೊಯ್ದು ಲೈಂಗಿಕ ದೌರ್ಜನ್ಯ ಎಸಗಿ ಚಿನ್ನ ಕಸಿದು ಪರಾರಿಯಾಗಿದ್ದ ಕೊಡಗು ಮೂಲದ ವ್ಯಕ್ತಿ

ಕಾಸರಗೋಡು: ಮನೆಯೊಂದರಲ್ಲಿ ನಿದ್ರಿಸುತ್ತಿದ್ದ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಚಿನ್ನದ ಬೆಂಡೋಲೆ ಕಸಿದು ಪರಾರಿಯಾದ ಘಟನೆ ಕಾಞಂಗಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕರ್ನಾಟಕದ ಕೊಡಗು ನಿವಾಸಿಯಾದ 33ರ ಹರೆಯದ ಯುವಕ ಈ ಕೃತ್ಯವೆಸಗಿರುವುದಾಗಿ ದೃಢೀಕರಿಸಲಾಗಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗೂ ಘಟನೆ ಸ್ಥಳಕ್ಕೂ ಹತ್ತಿರದ ನಂಟಿದೆ ಎಂದು ತಿಳಿದುಬಂದಿದೆ.

ಏ. ೧೫ ರ ಬುಧವಾರ ಮುಂಜಾನೆ 2.30ರ ವೇಳೆ ಘಟನೆ ನಡೆದಿದೆ. ಅಜ್ಜ ಹಸುವಿನ ಹಾಲು ಕರೆಯಲು ತೆರಳಿದ್ದ ವೇಳೆ ಮನೆಯ ಮುಂಭಾಗದ ಬಾಗಿಲು ಮೂಲಕ ಒಳನುಗ್ಗಿದ ದುಷ್ಕರ್ಮಿ ಬಾಲಕಿಯನ್ನು ಎತ್ತಿಕೊಂಡು ಅಡುಗೆ ಕೋಣೆ ಭಾಗದ ಬಾಗಿಲು ಮೂಲಕ ಪರಾರಿಯಾಗಿದ್ದನು. ಮನೆಯಿಂದ 400 ಮೀಟರ್ ದೂರದ ಬಯಲು ಪ್ರದೇಶಕ್ಕೆ ತಲುಪಿಸಿ ದೌರ್ಜನ್ಯಗೈದ ಬಳಿಕ ಆಕೆಯ ಚಿನ್ನದ ಬೆಂಡೋಲೆ ತೆಗೆದು ಆರೋಪಿ ಪರಾರಿಯಾಗಿದ್ದನು. ಸಮೀಪದ ಮನೆಗೆ ತಲುಪಿದ ಬಾಲಕಿ ವಿಷಯ ತಿಳಿಸಿದ್ದಾಳೆ.

ಕಣ್ಣೂರು ಡಿಐಜಿ, ಜಿಲ್ಲಾ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದ್ದು ಆರೋಪಿಯ ಗುರುತು ಹಚ್ಚಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಘಟನೆ ನಡೆದ ದಿನ ಬೆಳಿಗ್ಗೆ ಓರ್ವ ಬ್ಯಾಗ್ ಹಿಡಿದುಕೊಂಡು ನಡೆದು ಹೋಗುತ್ತಿರುವುದು ಕಂಡುಬಂದಿರುವುದಾಗಿ ಆ ಪ್ರದೇಶದ ಒಬ್ಬರು ತಿಳಿಸಿದ್ದಾರೆ. ಇದರ ಪ್ರಕಾರ ತನಿಖೆ ಮುಂದುವರಿಸಿದಾಗ ಆರೋಪಿಯನ್ನು ಗುರುತಿಸಲು ಸಾಧ್ಯವಾಗಿದೆ. ವ್ಯಕ್ತಿ ನಡೆದು ಹೋಗಿರುವುದಾಗಿ ಕಂಡುಬಂದ ಸ್ಥಳದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಯೆಂದು ಹೇಳಲಾಗುವ ವ್ಯಕ್ತಿಯ ಚಿತ್ರ ಕಂಡುಬಂದಿದೆ. ಇದರಿಂದ ಕೂಡಲೇ ಪೊಲೀಸ್ ತಂಡ ಕೊಡಗಿಗೆ ತೆರಳಿ ಆರೋಪಿಯ ಮನೆಯಲ್ಲಿ ತಪಾಸಣೆ ನಡೆಸಿದೆ. ಪೊಲೀಸರು ಹುಡುಕುತ್ತಿರುವ ವ್ಯಕ್ತಿ ಮನೆಗೆ ಬಂದಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

ತನ್ನನ್ನು ಹುಡುಕಿ ಪೊಲೀಸರು ಬರಲು ಸಾಧ್ಯತೆ ಇದೆಯೆಂದು ತಿಳಿದ ಆರೋಪಿ ಬೇರೆಲ್ಲಿಗಾದರೂ ಪರಾರಿಯಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಆದರೂ ಆರೋಪಿಯನ್ನು ಶೀಘ್ರ ಪತ್ತೆಹಚ್ಚಲು ಸಾಧ್ಯವಿದೆಯೆಂದು ಡಿವೈಎಸ್ಪಿಗಳಾದ ಪಿ. ಬಾಲಕೃಷ್ಣನ್ ನಾಯರ್, ಸಿ.ಕೆ. ಸುನಿಲ್ ಕುಮಾರ್. ವಿ. ರತೀಶ್, ಇನ್‌ಸ್ಪೆಕ್ಟರ್ ಎಂ.ಪಿ. ಅಸಾದ್ ಎಂಬಿವರನ್ನೊಳ ಗೊಂಡ ತಂಡ ವಿಶ್ವಾಸ ವ್ಯಕ್ತಪಡಿಸಿದೆ.

Related Articles

Latest Articles