ಬಿಹಾರ ಮೂಲದ ದಶರಥ ಮಾಂಜಿ ಅಂದರೆ ಥಟ್ಟನೆ ನೆನಪಾಗುವುದು ಕಡಿದಾದ ಬೆಟ್ಟವನ್ನು ಕೊರೆದು ರಸ್ತೆ ನಿರ್ಮಾಣ ಮಾಡಿದ್ದು. ಇಲ್ಲೊಬ್ಬರು ಸಹ ಇಂತಹದ್ದೇ ಸಾಹಸಕ್ಕೆ ಮುಂದಾಗಿ ಪರೋಪಕಾರದ ಕೆಲಸವನ್ನು ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಿರಿಜನ ಕಾಲೋನಿ ಪೇರಡ್ಕದಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿವೆ. ಆದರೆ, ಅದನ್ನು ಸಂಪರ್ಕಿಸಲು ರಸ್ತೆಯೇ ಇಲ್ಲ. ಕೇವಲ ಕಾಲ್ನಡಿಗೆ ಸೀಮಿತವಾಗಿದ್ದ ರಸ್ತೆಯ ಅಭಿವೃದ್ಧಿಗಾಗಿ ಸರಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಬೇಸತ್ತು ತಾವೇ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ ಗೋವಿಂದ ಮಲೆಕುಡಿಯ.
ಹಾರೆ- ಪಿಕಾಸಿ ಹಿಡಿದು ನಿತ್ಯ ಶ್ರಮದಾನ, ಸುಮಾರು 500 ಮೀಟರ್ ರಸ್ತೆ ದುರಸ್ತಿ, ಸರಕಾರದ ಕೆಲಸವನ್ನು ತಾನೇ ನಿರ್ವಹಿಸಿದ ಉದಾರಿ. ಇದು ಮಾಳ ಗ್ರಾಮದ ಪೇರಡ್ಕ ಗಿರಿಜನ ಕಾಲೊನಿ ನಿವಾಸಿ ಗೋವಿಂದ ಮಲೆಕುಡಿಯ ಅವರ ಜೀವನಕ್ರಮ. ತಮ್ಮ ಕಾಲೋನಿಗೆ ಸಂಪರ್ಕಿಸಲು ಸರಿಯಾದ ರಸ್ತೆ ಇಲ್ಲದ್ದನ್ನು ಅರಿತು, ಸ್ವತಃ ಹಾರೆ- ಪಿಕಾಸಿ ಹಿಡಿದು ರಸ್ತೆ ಮಾಡುವ ಮೂಲಕ ಪರೋಪಕಾರಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ.

ಪರಿಸರ ಪ್ರೇಮಿಯಾಗಿರುವ ಗೋವಿಂದ ಮಲೆಕುಡಿಯ ಅವರು ಪ್ರಸ್ತುತ 55ರ ಹರೆಯ. ತಮ್ಮ ಊರಿಗೆ ರಸ್ತೆ ಬೇಕೆನ್ನುವ ಛಲದಿಂದ ಛಲಬಿಡದ ಕಾಯಕ ಯೋಗಿಯಂತೆ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಸ್ತೆ ನಿರ್ಮಾಣ ಕೆಲಸ ಶುರು ಮಾಡಿದ್ದಾರೆ ಗೋವಿಂದ. ಗಿರಿಜನ ಕಾಲೋನಿಯ ಬುಗಟುಗುಂಡಿ ಒಂದನೇ ವಾರ್ಡ್ ರಸ್ತೆವರೆಗೆ ಒಟ್ಟು ಸುಮಾರು ಒಂದೂವರೆ ಕಿಲೋ ಮೀಟರ್‌ವರೆಗೆ ಅವರೇ ಸ್ವಂತ ಶ್ರಮ ವಹಿಸಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಜೊತೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಸಾಗಲು ಚರಂಡಿ ವ್ಯವಸ್ಥೆ ಯನ್ನು ಕೂಡ ಅವರೇ ಮಾಡಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಅರಣ್ಯ ಇಲಾಖೆಯ ಜತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಗಿಡನೆಟ್ಟು ಪೋಷಿಸಿ ಬೆಳೆಸುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಕೂಲಿ ಕೆಲಸವನ್ನು ಬಿಟ್ಟು ಮನೆಗೆಲಸ ಜತೆ, ರಸ್ತೆ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಗೋವಿಂದ ಮಲೆಕುಡಿಯ ಅವರು ರಸ್ತೆ ನಿರ್ಮಿಸಿರುವುದಕ್ಕೆ ಸಾರ್ವಜನಿಕರ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಈ ರಸ್ತೆಯ ಡಾಂಬರೀಕರಣ ಮಾಡಿ ಭಿವೃದ್ಧಿಪಡಿಸಬೇಕು. ತಕ್ಷಣವೇ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೂಲವರದಿ: ಟಿವಿ9 ಕನ್ನಡ