ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೆ ಕಾರ್ಯ ನಡೆಸಿದ ಭಾರತೀಯ ಪುರಾತತ್ವ ಸಂಶೋಧನಾ ಇಲಾಖೆಯು ತನ್ನ ವರದಿಯಲ್ಲಿ ಹಲವು ಅಚ್ಚರಿಯ ಮಾಹಿತಿಗಳನ್ನು ಬಹಿರಂಗಪಡಿಸಿದೆ. ವಾರಣಾಸಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗಿದ್ದ ವರದಿಯನ್ನು ನ್ಯಾಯಾಲಯ ಹಿಂದೂ ಹಾಗೂ ಮುಸ್ಲಿಂ ಕಕ್ಷೀದಾರರಿಗೆ ನೀಡಿತ್ತು. ಈ ವರದಿಯಲ್ಲಿ ಏನಿದೆ ಅನ್ನೋದನ್ನ ಬಹಿರಂಗಪಡಿಸಿರುವ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ಮಸೀದಿಯು ದೇಗುಲದ ಮೇಲೆ ನಿರ್ಮಾಣಗೊಂಡಿದೆ ಅನ್ನೋದು ಸಮೀಕ್ಷೆಯಲ್ಲಿ ಸಾಬೀತಾಗಿದೆ ಎಂದಿದ್ದಾರೆ. ಜೊತೆಯಲ್ಲೇ ಕನ್ನಡಿಗರಿಗೂ ಅಚ್ಚರಿ ಪಡುವಂಥಾ ಮಾಹಿತಿಯೊಂದನ್ನು ನೀಡಿದ್ದಾರೆ.
ಈ ಹಿಂದೆ ದೇಗುಲವಾಗಿದ್ದ ಜ್ಞಾನವಾಪಿಯಲ್ಲಿ ಪುರಾತತ್ವ ಸರ್ವೆ ಇಲಾಖೆಗೆ ಒಟ್ಟು 34 ಶಿಲಾ ಶಾಸನಗಳು ಪತ್ತೆಯಾಗಿವೆ. ಈ ಪೈಕಿ ಕನ್ನಡದ ಶಿಲಾ ಶಾಸನವೂ ಇದೆ. ಕನ್ನಡ ಭಾಷೆಯಲ್ಲಿ ಇರುವ ಶಿಲಾ ಶಾಸನದ ಜೊತೆಯಲ್ಲೇ ತೆಲುಗು, ದೇವನಾಗರಿ ಭಾಷೆಗಳಲ್ಲೂ ಶಿಲಾ ಶಾಸನಗಳಿವೆ. ದೇವತೆಗಳಾದ ಜನಾರ್ದನ, ರುದ್ರ ಹಾಗೂ ಉಮೇಶ್ವರನ ಹೆಸರುಗಳು ಈ ಶಾಸನಗಳಲ್ಲಿ ಪತ್ತೆಯಾಗಿವೆ.
ಕೆಲವು ಶಾಸನಗಳನ್ನು ಧ್ವಂಸ ಮಾಡಲಾಗಿದೆ. ಇನ್ನೂ ಕೆಲವು ಶಾಸನಗಳನ್ನು ಹಾಲಿ ಇರುವ ಕಟ್ಟಡಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದೂ ಸರ್ವೆಯಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಶಿಲಾ ಶಾಸನಗಳೂ ಕೂಡಾ ಈ ಹಿಂದೆ ಇಲ್ಲಿ ದೇಗುಲ ಇತ್ತು ಅನ್ನೋದಕ್ಕೆ ಕುರುಹುಗಳಾಗಿವೆ ಎಂದು ಅಧ್ಯಯನ ವರದಿ ವಿವರಿಸಿದೆ.