ಯಶಸ್ವಿ ಜೈಸ್ವಾಲ್ ಅವರ ಚೊಚ್ಚಲ ದ್ವಿಶತಕದ ಸಂಭ್ರಮಾಚರಣೆಯ ಬೆನ್ನಲ್ಲೇ ಆಂಗ್ಲರ ಮೇಲೆ ರಿವರ್ಸ್ ಸ್ವಿಂಗ್, ಯಾರ್ಕರ್ ಎಸೆತಗಳನ್ನು ಛೂಬಿಟ್ಟ ಜಸ್‌ಪ್ರೀತ್ ಬುಮ್ರಾ ವಿಶಾಖಪಟ್ಟಣ ಟೆಸ್ಟ್ ನಲ್ಲಿ ಭಾರತಕ್ಕೆ ದೊಡ್ಡ ಮೊತ್ತದ ಮೇಲುಗೈ ಒದಗಿಸಿದ್ದಾರೆ.
209 ರನ್ ಬಾರಿಸಿದ ಜೈಸ್ವಾಲ್ ಹಾಗೂ 45 ರನ್ನಿಗೆ 6 ವಿಕೆಟ್ ಉಡಾಯಿಸಿದ ಬುಮ್ರಾ ದ್ವಿತೀಯ ದಿನದಾಟದ ಹೀರೋ ಗಳಾಗಿ ಮೂಡಿಬಂದರು.
6 ವಿಕೆಟಿಗೆ 336 ರನ್ ಮಾಡಿ ಮೊದಲ ದಿನದಾಟ ಮುಗಿಸಿದ್ದ ಭಾರತ, ಶನಿವಾರ ಬ್ಯಾಟಿಂಗ್ ಮುಂದುವರಿಸಿ 396ಕ್ಕೆ ಆಲೌಟ್ ಆಯಿತು.
ಜವಾಬಿತ್ತ ಇಂಗ್ಲೆಂಡ್ 55.5 ಓವರ್‌ಗಳಲ್ಲಿ 253 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿತು. ರೋಹಿತ್ ಪಡೆಗೆ ಲಭಿಸಿದ ಮುನ್ನಡೆ 143 ರನ್. ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಭಾರತ, 5 ಓವರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ. ಲಭಿಸಿರುವ ಒಟ್ಟು ಲೀಡ್ 171 ರನ್. ಈ ಮುನ್ನಡೆಯನ್ನು ಕನಿಷ್ಠ 400 ರನ್ ತನಕವಾದರೂ ಏರಿಸಬೇಕಾದ ಅಗತ್ಯವೀಗ ಟೀಮ್ ಇಂಡಿಯಾ ಮುಂದಿದೆ.
ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ “ಬ್ರಿಲಿಯಂಟ್ ಬೌಲಿಂಗ್’ ಮೂಲಕ ಆಂಗ್ಲರ ಪಾಳೆಯವನ್ನು ಕಂಪಿಸುವಂತೆ ಮಾಡಿದರು. ಆರಂಭದಲ್ಲಿ ಜಾಕ್ ಕ್ರಾಲಿ ಅಬ್ಬರದ ಬ್ಯಾಟಿಂಗ್ ನಡೆಸಿದರೂ ಒಮ್ಮೆ ಬುಮ್ರಾ ಲಯ ಕಂಡುಕೊಂಡ ಬಳಿಕ ಇಂಗ್ಲೆಂಡ್ ಆಟಗಾರರು ದಿಕ್ಕುತಪ್ಪತೊಡಗಿದರು. ಕೇವಲ 15.5 ಓವರ್‌ಗಳಲ್ಲಿ ಅವರು ರೂಟ್ (5), ಪೋಪ್ (23), ಬೇರ್‌ಸ್ಟೊ (25), ಸ್ಟೋಕ್ಸ್ (47) ಮತ್ತು ಆಯಂಡರ್ಸನ್ (6) ವಿಕೆಟ್ ಉಡಾಯಿಸಿದರು.
ಅದರಲ್ಲೂ ಕಳೆದ ಪಂದ್ಯದ ಹೀರೋ ಓಲೀ ಪೋಪ್ ಬೌಲ್ಡ್ ಆದ ರೀತಿಯಂತೂ ಅದ್ಭುತವಾಗಿತ್ತು. ಚೆಲ್ಲಾಪಿಲ್ಲಿಯಾದ ಸ್ಟಂಪ್ಸ್, ಆಗಸಕ್ಕೆ ಚಿಮ್ಮಿದ ಬೇಲ್ಸ್; ಬ್ಯಾಟನ್ನು ನೆಲಕ್ಕೆ ಊರಿಕೊಂಡು, ತಲೆಯನ್ನು ಕೆಳಹಾಕಿಕೊಂಡು ಅಸಹಾಯಕ ಸ್ಥಿತಿಯಲ್ಲಿ ನಿಂತ ಪೋಪ್… “ಪಿಕ್ಚರ್ ಆಫ್ ದ ಡೇ’ಗೆ ಇದಕ್ಕಿಂತ ಅರ್ಥವತ್ತಾದ ಚಿತ್ರವನ್ನು ಆಯ್ಕೆ ಮಾಡಲು ಸಾಧ್ಯವೇ ಇರಲಿಲ್ಲ.
ಇನ್ನೇನು ಇಂಗ್ಲೆಂಡ್ ಬ್ಯಾಟರ್ ಜತೆಯಾಟ ಕಟ್ಟುತ್ತಾರೆ ಎನ್ನುವಾಗ ನಾಯಕ ರೋಹಿತ್, ಬುಮ್ರಾ ಕೈಗೆ ಚೆಂಡು ನೀಡುತ್ತಿದ್ದರು. ಬುಮ್ರಾ ಎಲ್ಲೂ ನಿರಾಸೆಗೊಳಿಸಲಿಲ್ಲ. ಬುಮ್ರಾ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ 10ನೇ ನಿದರ್ಶನ ಇದಾಗಿದೆ. ಈ ಸಾಧನೆಯ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನೂ ಪೂರ್ತಿಗೊಳಿಸಿದರು. ಚೈನಾಮನ್ ಬೌಲರ್ ಕುಲದೀಪ್ ಯಾದವ್ 3 ವಿಕೆಟ್ ಉರುಳಿಸಿದರು.