ಇಸ್ಲಾಮಾಬಾದ್: ಪಾಕಿಸ್ತಾನದ ನ್ಯಾಯಾಲಯ ಶನಿವಾರ ‘ಇಸ್ಲಾಮೇತರ ನಿಕಾಹ್’ ಪ್ರಕರಣದಲ್ಲಿ, ಪ್ರಸ್ತುತ ಜೈಲಿನಲ್ಲಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬುಶ್ರಾ ಬೀಬಿ ತನ್ನ ಹಿಂದಿನ ಪತಿ ಮೇನಕಾ ಖವಾರ್ ಅವರಿಗೆ ವಿಚ್ಛೇದನ ನೀಡಿದ ನಂತರ ಇಮ್ರಾನ್ ಖಾನ್ ಅವರನ್ನು ಮದುವೆಯಾಗುವ ಎರಡು ವಿವಾಹಗಳ ನಡುವೆ ಕಡ್ಡಾಯ ವಿರಾಮ ಅಥವಾ ಇದ್ದತ್ ಅನ್ನು ಆಚರಿಸುವ ಇಸ್ಲಾಮಿಕ್ ಪದ್ಧತಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು.
ಮೇನಕಾ ಖವಾರ್ ಅವರು ತಮ್ಮ ಮಾಜಿ ಪತ್ನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರು ಮದುವೆಗೆ ಮುಂಚೆಯೇ ಅಕ್ರಮ ಸಂಬಂಧ ಹೊಂದಿದ್ದರು ಎಂದು ಸಹ ಆರೋಪಿಸಿದ್ದು, ಇದು ಕಲ್ಲಿನಿಂದ ಹೊಡೆದು ಸಾಯಿಸುವ ಮರಣದಂಡನೆ ಶಿಕ್ಷೆಗೆ ಗುರಿಯಾಗುವ ಅಪರಾಧವಾಗಿದೆ.
ಪ್ರಕರಣದ ಕುರಿತು ಅಡಿಯಾಲಾ ಜೈಲಿನಲ್ಲಿ 14 ಗಂಟೆಗಳ ಕಾಲ ನಡೆದ ಮ್ಯಾರಥಾನ್ ವಿಚಾರಣೆಯ ನಂತರ ವಿಚಾರಣಾ ನ್ಯಾಯಾಲಯವು ಶುಕ್ರವಾರ ರಾತ್ರಿ ವಿಚಾರಣೆಯನ್ನು ಪೂರ್ಣಗೊಳಿಸಿ ಇಂದು ತೀರ್ಪು ನೀಡಿದೆ.
ಇಮ್ರಾನ್ ಖಾನ್ ಅವರು ಪ್ರಸ್ತುತ ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಜೈಲಿನಲ್ಲಿದ್ದಾರೆ, ಆದರೆ ಅವರ ಪತ್ನಿ ಇಸ್ಲಾಮಾಬಾದ್‌ನಲ್ಲಿರುವ ಅವರ ಬೆಟ್ಟದ ಮ್ಯಾನ್ಷನ್‌ನಲ್ಲಿ ಶಿಕ್ಷೆಯನ್ನು ಅನುಭವಿಸಲು ಅನುಮತಿಸಲಾಗಿದೆ.