ಐಎಎಸ್ ದಂಪತಿಗಳ ಮಗಳು 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡುತ್ತಿದ್ದ ಲಿಪಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ಮುಂಬೈನ ಕಫ್ ಪರೇಡ್‌ನಲ್ಲಿನ ಸುನೀತಿ ಬಿಲ್ಡಿಂಗ್ನಲ್ಲಿ ಈ ಘಟನೆ ನಡೆದಿದೆ. ಎಲ್‌ಎಲ್‌ಬಿ ಪರೀಕ್ಷೆ ಬರೆದ ಮೇಲೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಲಿಪಿ (27) ಹರಿಯಾಣದ ಸೋನಿಪತ್‌ನಲ್ಲಿನ ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡುತ್ತಿದ್ದಳು.
ಇತ್ತೀಚೆಗಷ್ಟೇ ಪರೀಕ್ಷೆಯನ್ನು ಬರೆದಿದ್ದು ಅದರಲ್ಲಿ ಉತ್ತಮ ಸಾಧನೆ ಮಾಡಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಲಿಪಿ ಡೆತ್ ನೋಟ್ ಬರೆದಿಟ್ಟು ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಕಟ್ಟಡದ 10ನೇ ಮಹಡಿಯಿಂದ ಜಿಗಿದಿದ್ದಾಳೆ. ತಕ್ಷಣ ಯುವತಿಯನ್ನು ತಂದೆ ವಿಕಾಸ್ ರಸ್ತೋಗಿ ಮತ್ತು ತಾಯಿ ರಾಧಿಕಾ ರಸ್ತೋಗಿ ಜಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ವೈದ್ಯರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ ಅಂತ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಯುವತಿಯ ರೂಮ್ನಲ್ಲಿದ್ದ ಡೆತ್ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ಸಾವಿಗೆ ಯಾರು ಕಾರಣರಲ್ಲ. ಯಾರನ್ನು ದೂಷಿಸಬೇಡಿ ಎಂದು ಬರೆದಿದ್ದಾಳೆ ಎನ್ನುವುದು ಪೊಲೀಸರು ಹೇಳಿದ್ದಾರೆ. ತನ್ನ ಶೈಕ್ಷಣಿಕ ವರ್ಷದಲ್ಲಿ ಸರಿಯಾಗಿ ವಿದ್ಯಾಭ್ಯಾಸ ಮಾಡಿಲ್ಲ ಎಂದು ಮನನೊಂದಿದ್ದಳು. ಅಲ್ಲದೇ ಪರೀಕ್ಷೆಯಲ್ಲಿ ಅಂತಹ ಸಾಧನೆ ಮಾಡಿರಲಿಲ್ಲ. ಇದರಿಂದ ಒತ್ತಡಕ್ಕೆ ಸಿಲುಕಿ ಲಿಪಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.
ಇನ್ನು ಯುವತಿಯ ತಂದೆ ವಿಕಾಸ್ ರಸ್ತೋಗಿ ಅವರು ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಅಲ್ಲದೇ ಇವರ ತಾಯಿ ರಾಧಿಕಾ ರಸ್ತೋಗಿ ಮಹಾರಾಷ್ಟ್ರ ಕೆಡಾರ್ನ ಮಹಿಳಾ ಐಎಎಸ್ ಆಫೀಸರ್ ಆಗಿದ್ದಾರೆ. ಸರ್ಕಾರದ ಉನ್ನತ ಹುದ್ದೆಯಲ್ಲಿರುವ ದಂಪತಿ ಮಗಳನ್ನು ಕಳೆದುಕೊಂಡು ತೀವ್ರ ದುಃಖಿತರಾಗಿದ್ದಾರೆ. ನಗರದ ಗೋಕುಲದಾಸ್ ತೇಜಪಾಲ್ ಆಸ್ಪತ್ರೆಯಲ್ಲಿ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.