ರಾಜ್ಯದಲ್ಲಿ ನಿಕೋಟಿನ್ ರಹಿತ ತಂಬಾಕು ರಹಿತ, ಸ್ವಾಧಭರಿತ, ಸ್ವಾಧರಹಿತ ಹುಕ್ಕ ಮೊಲಾಸಸ್, ಶಿಶಾ ಹಾಗೂ ಇದೇ ಮಾದರಿಯ ಇನ್ನಿತರೆ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಪ್ರಚೋದನೆ, ಸಂಗ್ರಹಣೆ, ವ್ಯಾಪಾರವನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ ಟೊಬ್ಯಾಕೊ ಸರ್ವೇ 2016-17 ಅಧ್ಯಯನ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು (15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಒಂದಲ್ಲ ಒಂದು ರೀತಿಯ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ.
ಈ ಪೈಕಿ ಶೇ.8.8 ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ.
ಭಾರತದಲ್ಲಿ ತಂಬಾಕು ಉತ್ಪನ್ನಗಳ ಸೇವನೆ, ಮಾರಾಟ, ಜಾಹೀರಾತು, ಸಂಗ್ರಹಣೆ, ವಾಣಿಜ್ಯ ವ್ಯಾಪಾರ, ಉತ್ಪಾದನೆ, ಹಂಚಿಕೆ ಇವುಗಳನ್ನು ಸಿಗರೇಟ್ ಆಂಡ್ ಟೊಬ್ಯಾಕೋ ಪ್ರಾಡಕ್ಟ್ ಆಕ್ಟ್ (COTPA) 2003 ರಲ್ಲಿ ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಧ್ಯಯನಗಳ ಪ್ರಕಾರ, 45 ನಿಮಿಷಗಳ ಹುಕ್ಕಾ ಸೇವನ, 100 ಸಿಗರೇಟ್ ಸೇದುವುದಕ್ಕೆ ಸಮನಾಗಿರುತ್ತದೆ ಹಾಗೂ ಆರೋಗ್ಯಕ್ಕೆ ಮಾರಕ ಎಂದು ಉಲ್ಲೇಖಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ, ಹುಕ್ಕಾ ಒಂದು ವ್ಯಸನಕಾರಿ ವಸ್ತುವಾಗಿದ್ದು, ಅದರಲ್ಲಿರುವ ನಿಕೋಟಿನ್ ಅಥವಾ ತಂಬಾಕು ಹಾಗೂ ಮೊಲಾಸಸ್ ಅಥವಾ ಸುವಾಸನಭರಿತ ಪದಾರ್ಥಗಳಲ್ಲಿ ಹಚ್ಚಿನ ಪುಮಾಣದಲ್ಲಿ ಕಾರ್ಬನ್ ಮಾನಾಕ್ಸೆಡ್ ರಾಸಾಯನಿಕ ವಸ್ತುವನ್ನು ಒಳಗೊಂಡಿದ್ದು ಆರೋಗ್ಯಕ್ಕೆ ಅತ್ಯಂತ ಮಾರಕ ಎಂದು ಎಚ್ಚರಿಸಿದ್ದಾರೆ.
ಸಂವಿಧಾನದ 47ನೇ ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದಂತೆ, ಸಾರ್ವಜನಿಕರ ಆರೋಗ್ಯ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿರುತ್ತದೆ. ಒಟ್ಟಾರೆಯಾಗಿ, ಹುಕ್ಕಾ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ ತಂಬಾಕು ರಹಿತ ಸ್ವಾದಭರಿತ, ಸ್ವಾಧರಹಿತ ಹುಕ್ಕಾ ಮೊಲಾಸಸ್, ಶಿಶಾ ಹಾಗೂ ಇದೇ ಮಾದರಿಯ ಇನ್ನಿತರ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಪ್ರಚೋದನೆ, ಸಂಗ್ರಹಣೆ, ವ್ಯಾಪಾರವನ್ನು ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಖಡಕ್ ಆದೇಶ ಮಾಡಿದ್ದಾರೆ.
ಇದನ್ನು ಉಲ್ಲಂಘನೆ ಮಾಡಿದವರ ವಿರುದ್ಧ COTPA 2003, ಕಾಯ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದ 2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ 2015 ಮತ್ತು ಭಾರತೀಯ ದಂಡಸಂಹಿತ ಮತ್ತು ನಿಯಂತ್ರಣ ಹಾಗೂ ಅಗ್ನಿ ಸುರಕ್ಷತೆ ಕಾಯಿದೆ ಪ್ರಕಾರ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.